ನಿನ್ನೆ ಬಂದಿರುವ ಲೋಕಸಭಾ ಚುನಾವಣೆಯ ಫಲಿತಾಂಶ ಬಿಜೆಪಿಗೆ ಮರ್ಮಾಘಾತವನ್ನೇ ನೀಡಿದೆ. 400ಕ್ಕೂ ಅಧಿಕ ಸೀಟು ಗೆಲ್ಲುವ ವಿಶ್ವಾಸದಲ್ಲಿದ್ದ ಪಕ್ಷ 300 ಕೂಡ ದಾಟದೇ ಇರುವುದಕ್ಕೆ ಭಾರಿ ಶಾಕ್ ನೀಡಿದೆ. ಅದರಲ್ಲಿಯೂ ಬಿಜೆಪಿಯ ಭದ್ರಕೋಟೆಯಾಗಿದ್ದ ಉತ್ತರ ಪ್ರದೇಶದಲ್ಲಿನ ಮತದಾರರು ಈ ಬಾರಿ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಆಘಾತ ನೀಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆಯಿಂದ ಉತ್ತರ ಪ್ರದೇಶದ ಜನತೆಯ ಮೇಲೆ ಪಕ್ಷ ಇಟ್ಟುಕೊಂಡಿದ್ದ ವಿಶ್ವಾಸಕ್ಕೆ ಧಕ್ಕೆ ಬಂದಿದೆ.
ಅದೇ ಇನ್ನೊಂದೆಡೆ ಕಾಂಗ್ರೆಸ್ಸಿಗರು ಬಹುಮತ ಪಡೆಯದಿದ್ದರೂ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆದಿಲ್ಲ ಎನ್ನುವ ಖುಷಿಯಲ್ಲಿದ್ದಾರೆ. ಇದೀಗ ಮೈತ್ರಿ ಅಭ್ಯರ್ಥಿಗಳತ್ತ ಎಲ್ಲರ ಚಿತ್ತ ನೆಟ್ಟಿದೆ. ಯಾವ ಪಕ್ಷ ಗದ್ದುಗೆ ಏರಲಿದೆ ಎನ್ನುವುದು ಸದ್ಯ ಸಸ್ಪೆನ್ಸ್. ಕೆಲವೇ ಗಂಟೆಗಳಲ್ಲಿ ಇದು ಸ್ಪಷ್ಟವಾಗಲಿದೆ. ಆದರೆ ಇದರ ನಡುವೆಯೇ, ಬಾಲಿವುಡ್ ನಟ ಅನುಪಮ್ ಖೇರ್ ನಿಗೂಢಾರ್ಥದಲ್ಲಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಅಷ್ಟಕ್ಕೂ ಅನುಪಮ್ ಖೇರ್ ಅವರು ಬಿಜೆಪಿಯ ಪರವಾಗಿ ಒಲವು ಇರುವವರು. ಇದಾಗಲೇ ಸಾಕಷ್ಟು ಬಾರಿ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿದವರು. ಈ ಫಲಿತಾಂಶದಿಂದ ಅನುಪಮ್ ಖೇರ್ ಅವರಿಗೂ ಸಹಜವಾಗಿಯೇ ಶಾಕ್ ಆಗಿದೆ. ಇದನ್ನೇ ಇಟ್ಟುಕೊಂಡು ನಟ ಇದೀಗ ಪೋಸ್ಟ್ ಮಾಡಿದ್ದಾರೆ.
‘ಪ್ರಾಮಾಣಿಕ ವ್ಯಕ್ತಿ ಯಾವಾಗಲೂ ಹೆಚ್ಚು ಪ್ರಾಮಾಣಿಕನಾಗಿರಬಾರದು ಎಂದು ನಾನು ಆಗಾಗ ಯೋಚಿಸುತ್ತೇನೆ. ಯಾವಾಗಲೂ ನೇರವಾಗಿರುವ ಮರವನ್ನೇ ಮೊದಲು ಕತ್ತರಿಸುತ್ತಾರೆ. ಪ್ರಾಮಾಣಿಕ ವ್ಯಕ್ತಿ ಯಾವಾಗಲೂ ಹೆಚ್ಚು ಸಮಸ್ಯೆಯನ್ನು ಎದುರಿಸುತ್ತಾರೆ. ಎಷ್ಟೇ ಅಡೆತಡೆ ಬಂದರೂ ಅವರು ಪ್ರಾಮಾಣಿಕತೆಯನ್ನು ಬಿಟ್ಟುಕೊಡುವುದಿಲ್ಲ. ಈ ಕಾರಣದಿಂದಲೇ ಅವರು ಕೋಟಿ ಕೋಟಿ ಜನರಿಗೆ ಸ್ಫೂರ್ತಿಯಾಗಿದ್ದಾರೆ’ ಎಂದಿದ್ದಾರೆ ಅನುಪಮ್ ಖೇರ್. ಇದು ನೇರವಾಗಿ ಉತ್ತರ ಪ್ರದೇಶದ ಫಲಿತಾಂಶದೆಡೆ ಬೆರಳು ಮಾಡಿ ತೋರಿಸುತ್ತಿದೆ ಎಂದು ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದಾರೆ. ಇನ್ನು ಹಲವರು ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಆಗಿರುವ ಅಗಾಧ ಪ್ರಗತಿಯನ್ನು ನೋಡಿಯೂ, ಜನರು ಮತ ಚಲಾಯಿಸದೇ ಇರುವುದು ನೋವಿನ ಸಂಗತಿ ಎಂದಿದ್ದು, ಅನುಮಪ್ ಖೇರ್ ಅವರು ಬರೆದಿರುವುದು ಸರಿಯಾಗಿದೆ ಎನ್ನುತ್ತಿದ್ದಾರೆ. ಹಗಲು ರಾತ್ರಿ ಶ್ರಮಿಸಿ ಭಾರತವನ್ನು ಐದನೇ ಅರ್ಥವ್ಯವಸ್ಥೆಯನ್ನಾಗಿ ಮಾಡುವಲ್ಲಿ ಪ್ರಧಾನಿ ತೋರಿದ ಸಾಹಸ ಮೆಚ್ಚುವಂಥದ್ದು. ಆದರೆ ಮತದಾರರಿಗೆ ಇದ್ಯಾವುದೂ ತೋರದೇ ಹೋಗಿರುವುದು ನೋವಿನ ಸಂಗತಿ ಎಂದು ಇನ್ನಷ್ಟು ಅಭಿಮಾನಿಗಳು ಬರೆದುಕೊಂಡಿದ್ದಾರೆ.
ಇನ್ನು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಂಗನಾ ರಣಾವತ್ ಅವರು ಗೆಲುವು ಸಾಧಿಸಿದ್ದಾರೆ. ಅವರಿಗೆ ಅನುಪಮ್ ಖೇರ್ ಅಭಿನಂದನೆ ತಿಳಿಸಿದ್ದಾರೆ. ಹೊಸ ಪ್ರಯಾಣಕ್ಕೆ ಅವರು ಶುಭ ಕೋರಿದ್ದಾರೆ.