ಲೋಕಸಭೆ ಚುನಾವಣೆ ಫಲಿತಾಂಶ 2024: ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನಿರೀಕ್ಷೆಯಂತೆಯೇ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದು, ಗೆಲುವಿನ ಅಂತರವನ್ನೂ ಹೆಚ್ಚಿಸಿಕೊಂಡಿದ್ದಾರೆ. ಮೋದಿ ಪಡೆದ ಮತಗಳೆಷ್ಟು, ಪ್ರತಿಸ್ಪರ್ಧಿ ಅಭ್ಯರ್ಥಿಗಳು ಪಡೆದ ಮತ ಎಷ್ಟು? ಎಲ್ಲ ವಿವರಗಳು ಇಲ್ಲಿದೆ.
ವಾರಾಣಸಿ, ಜೂನ್ 4: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ವಾರಾಣಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ 1,52,513 ಮತಗಳ ಅಂತರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. 2014 ಹಾಗೂ 2019ರಲ್ಲಿ ಈ ಕ್ಷೇತ್ರದಲ್ಲಿ ಗೆದ್ದು ಪ್ರಧಾನಿಯಾಗಿದ್ದ ಮೋದಿ ಈ ಬಾರಿ ಗೆಲುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಅಜಯ್ ರೈ, ಬಿಎಸ್ಪಿಯಿಂದ ಅಥರ್ ಜಮಾಲ್ ಲಾರಿ ಸ್ಪರ್ಧಿಸಿದ್ದಾರೆ. ಉಳಿದಂತೆ, ದಿನೇಶ್ ಕುಮಾರ್ ಯಾದವ್, ಗಗನ್ ಪ್ರಕಾಶ್ ಯಾದವ್, ಸಂಜಯ್ ಕುಮಾರ್ ತಿವಾರಿ, ಕೋಲಿಶೆಟ್ಟಿ ಶಿವಕುಮಾರ್ ಸ್ಪರ್ಧಿಸಿದ್ದಾರೆ. ಮೋದಿಗೆ 6,12,970 ಮತ, ಅಜಯ್ ರೈಗೆ 4,60,457 ಮತಗಳು ಲಭಿಸಿವೆ.
ಪ್ರಧಾನಿ ಮೋದಿ 2014ರ ಚುನಾವಣೆಯಲ್ಲಿ ಮೊಟ್ಟಮೊದಲ ಬಾರಿಗೆ ವಾರಾಣಸಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ ಭಾರಿ ಅಂತರದಿಂದ ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರು. ದೇಶದ ಪ್ರಧಾನಿಯಾದರು. ವಾರಾಣಸಿ ನಗರವನ್ನು ‘ದೇವಾಲಯಗಳ ನಗರ’, ‘ದೇಶದ ಧಾರ್ಮಿಕ ರಾಜಧಾನಿ’, ‘ದೀಪಗಳ ನಗರ’, ‘ಶಿವನ ನಗರ’, ‘ಜ್ಞಾನದ ನಗರ’ ಎಂಬಿತ್ಯಾದಿ ಹೆಸರುಗಳಿಂದ ಸಂಬೋಧಿಸಲಾಗುತ್ತಿದೆ.
ವಾರಣಾಸಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 5 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ ಬಿಜೆಪಿ ಮೈತ್ರಿಕೂಟ ಐದೂ ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. 4 ಸ್ಥಾನಗಳು ಬಿಜೆಪಿ ಖಾತೆಗೆ ಮತ್ತು ಒಂದು ಸ್ಥಾನ ಅಪ್ನಾ ದಳ (ಸೋನೇಲಾಲ್) ಪಾಲಾಗಿತ್ತು. ನರೇಂದ್ರ ಮೋದಿಯವರು ಚುನಾವಣೆಗೆ ಸ್ಪರ್ಧಿಸಿದ್ದರಿಂದ ವಾರಣಾಸಿ ಹೈ ಪ್ರೊಫೈಲ್ ಕ್ಷೇತ್ರವಾಗಿ ಹೊರಹೊಮ್ಮಿದೆ.
2019ರಲ್ಲಿ ಹೀಗಿತ್ತು ಫಲಿತಾಂಶ
2019 ರ ಲೋಕಸಭಾ ಚುನಾವಣೆಯಲ್ಲಿ, ನರೇಂದ್ರ ಮೋದಿ ಬಿಜೆಪಿ ಟಿಕೆಟ್‌ನಲ್ಲಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಮೋದಿ ವಿರುದ್ಧ ಸಮಾಜವಾದಿ ಪಕ್ಷದಿಂದ ಶಾಲಿನಿ ಯಾದವ್ ಕಣದಲ್ಲಿದ್ದರೆ, ಕಾಂಗ್ರೆಸ್ ಅಜಯ್ ರೈ ಅವರನ್ನು ಕಣಕ್ಕಿಳಿಸಿತ್ತು. ಚುನಾವಣೆ ಏಕಪಕ್ಷೀಯವಾಗಿತ್ತಲ್ಲದೆ, ಪ್ರಧಾನಿ ಮೋದಿ 4,79,505 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
2014ರಲ್ಲಿ ಮೋದಿ ವಿರುದ್ಧ ಸ್ಪರ್ಧಿಸಿದ್ದ ಕೇಜ್ರಿವಾಲ್
ಈ ಹಿಂದೆ 2014ರ ಚುನಾವಣೆಯಲ್ಲೂ ನರೇಂದ್ರ ಮೋದಿ ಇಲ್ಲಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಪ್ರಧಾನಿ ನರೇಂದ್ರ ಮೋದಿ 674,664 ಮತಗಳನ್ನು ಪಡೆದರೆ, ಶಾಲಿನಿ ಯಾದವ್ 195,159 ಮತಗಳನ್ನು ಮತ್ತು ಅಜಯ್ ರೈ 152,548 ಮತಗಳನ್ನು ಪಡೆದಿದ್ದರು. ವಾರಣಾಸಿ ಕ್ಷೇತ್ರದಲ್ಲಿ ಒಟ್ಟು 1,060,829 ಮತಗಳು ಚಲಾವಣೆಯಾಗಿದ್ದವು. ಈ ಚುನಾವಣೆಯಲ್ಲಿ ಮೋದಿ 581,022 ಮತಗಳನ್ನು ಪಡೆದರೆ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ 209,238 ಮತಗಳನ್ನು ಪಡೆದಿದ್ದರು. ಮೋದಿ ಈ ಚುನಾವಣೆಯಲ್ಲಿ 371,784 ಮತಗಳ ಅಂತರದಿಂದ ಗೆದ್ದರು ಮತ್ತು ಈ ಗೆಲುವಿನ ನಂತರ ದೇಶದ ಪ್ರಧಾನಿಯೂ ಆದರು.