‘SIT ಶೌಚಾಲಯದಲ್ಲಿ ತುಂಬಾ ವಾಸನೆ’- ಕೋರ್ಟ್‌ ಅಲ್ಲಿ ಪ್ರಜ್ವಲ್ ರೇವಣ್ಣ ದೂರಿಗೆ ಎಲ್ಲರಿಗೂ ನಗು

ಬೆಂಗಳೂರು ಮೇ 31 : ಹಾಸನ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು 42ನೇ ACMM ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಎಸ್‌ಐಟಿ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದೆ. ಇದಕ್ಕೆ ಪ್ರಜ್ವಲ್ ರೇವಣ್ಣ ಪರ ವಕೀಲರಾದ ಅರುಣ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಜಾಮೀನು ನೀಡುವಂತೆ ವಾದ ಮಂಡಿಸಿದ್ದಾರೆ.

ಇಂದು ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್ ರೇವಣ್ಣ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ನ್ಯಾಯಾಲಯ ಸೂಚಿಸಿತ್ತು. ಲೈಂಗಿಕ ದೌರ್ಜನ್ಯ & ಅತ್ಯಾಚಾರ ಪ್ರಕರಣಗಳಲ್ಲಿ ಬಂಧಿಸಿರುವ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರನ್ನು ಕೋರ್ಟ್‌ಗೆ ಹಾಜರು ಮಾಡಿದ್ದರು.

ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸುತ್ತಿದ್ದಂತೆ ಎಸ್ಐಟಿ ಪ್ರಕರಣದ ಕೇಸ್ ಡೈರಿ (ಸಿಡಿ) ಕೋರ್ಟ್‌ಗೆ ಸಲ್ಲಿಸಿತು. ಆಗ ನ್ಯಾಯಾಧೀಶರಾದ ಕೆ.ಎನ್ ಶಿವಕುಮಾರ್ ಅವರು ಆರೋಪಿಯನ್ನು ಹಾಜರು ಪಡಿಸಲು ಸೂಚಿಸಿದ್ದಾರೆ. ಕೋರ್ಟ್‌ ಕಟಕಟೆಯಲ್ಲಿ ನಿಂತ ಪ್ರಜ್ವಲ್ ರೇವಣ್ಣ ಅವರನ್ನು ಜಡ್ಜ್ ಮೊದಲಿಗೆ ಕೆಲವು ಪ್ರಶ್ನೆಗಳನ್ನ ಕೇಳಿದರು. ನಿಮ್ಮ ಹೆಸರೇನು? ಅಂತ ಕೇಳಿದ ಪ್ರಶ್ನೆಗೆ ಪ್ರಜ್ವಲ್ ರೇವಣ್ಣ ಅವರು ಉತ್ತರ ನೀಡಿದ್ದಾರೆ. ಇದೇ ವೇಳೆ ನಿಮಗೇನಾದ್ರೂ ಟಾರ್ಚರ್ ಆಯ್ತಾ? ನಿಮ್ಮನ್ನು ಬಂಧಿಸಿರುವ ವಿಷಯವನ್ನು ನಿಮ್ಮ ತಂದೆ-ತಾಯಿಗೆ ತಿಳಿಸಿದ್ರಾ ಎಂದು ಜಡ್ಜ್ ಪ್ರಶ್ನಿಸಿದ್ದಾರೆ.

ಜಡ್ಜ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಜ್ವಲ್ ರೇವಣ್ಣ ಅವರು ಇಲ್ಲ ಟಾರ್ಚರ್ ಏನು ಆಗಿಲ್ಲ. ಆದರೆ ಎಸ್ಐಟಿ ಕಚೇರಿಯ ಶೌಚಾಲಯದ ಬಗ್ಗೆ ಪ್ರಜ್ವಲ್ ರೇವಣ್ಣ ದೂರು ನೀಡಿದ್ದಾರೆ. ಎಸ್‌ಐಟಿಯಲ್ಲಿರುವ ಶೌಚಾಲಯದಲ್ಲಿ ತುಂಬಾ ವಾಸನೆ ಇದೆ ಎಂದು ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಈ ಮಾತು ಕೇಳಿ ಕೋರ್ಟ್ ಹಾಲ್‌ನಲ್ಲಿದ್ದ ಕೆಲವರು ನಕ್ಕಿದ್ದಾರೆ. ಆಗ ಜಡ್ಜ್‌ ಎಲ್ಲರೂ ಸುಮ್ಮನಿರಲು ಸೂಚನೆ ನೀಡಿದ್ದಾರೆ.

ಇದೇ ವೇಳೆ ಎಸ್‌ಐಟಿ ಕಸ್ಟಡಿಯಲ್ಲಿರುವಾಗ ಮನೆಯೂಟ ನೀಡಲು ಪ್ರಜ್ವಲ್ ರೇವಣ್ಣ ಪರ ವಕೀಲರು ಮನವಿ ಮಾಡಿದ್ದಾರೆ. ಇದಕ್ಕೆ ಎಸ್‌ಐಟಿ ಅಧಿಕಾರಿಗಳು ಮನೆಯೂಟ ಬೇಡ. ಅದಕ್ಕೆ ನಾವೇ ಊಟ ಕೊಡ್ತೀವಿ ಎಂದು ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣ ಅವರ ಕೇಸ್ ವಿಚಾರಣೆಯನ್ನ ನೋಡಲು ACMM ಕೋರ್ಟ್‌ ಇವತ್ತು ಹೌಸ್ ಫುಲ್ ಆಗಿತ್ತು. ಪ್ರಜ್ವಲ್ ರೇವಣ್ಣ ಅವರ ಪ್ರಕರಣದ ವಾದ, ಪ್ರತಿವಾದವನ್ನ ನೋಡಲು ಬಹಳಷ್ಟು ಮಂದಿ ಕೋರ್ಟ್‌ಗೆ ಆಗಮಿಸಿದ್ದರು.