ಬೆಂಗಳೂರಿನಲ್ಲಿ ಈ ವಾರವೂ ತರಕಾರಿ ದುಬಾರಿ, 220 ರೂ. ದಾಟಿದ ಬೀನ್ಸ್ ದರ: ಇಲ್ಲಿದೆ ಬೆಲೆ ವಿವರ

ಬೆಂಗಳೂರು, ಮೇ 28: ಬೆಲೆ ಏರಿಕೆಯಿಂದಾಗಿ ಜನರು ಈಗಾಗಲೇ ರೋಸಿ ಹೋಗಿದ್ದಾರೆ.‌ ಈ‌ ಮಧ್ಯೆ, ತರಕಾರಿಗಳ‌ ಬೆಲೆ ವಾರದಿಂದ ವಾರಕ್ಕೆ ಏರಿಕೆಯಾಗುತ್ತಿದ್ದು, ಗ್ರಾಹಕರಿಗೆ ಶಾಕ್ ನೀಡುತ್ತಿದೆ. ಬೆಂಗಳೂರಿನಲ್ಲಿ ತರಕಾರಿಗಳ‌ ಬೆಲೆ‌ ದಿನದಿಂದ ಏರಿಕೆಯಾಗುತ್ತಿದೆ. ಕೆಜಿಗೆ 20 ರೂ. ಇದ್ದ ತರಕಾರಿಗಳ ಬೆಕೆ ಈಗ ಬರೋಬ್ಬರಿ 80 ರೂ. ಗಡಿ ದಾಟಿವೆ. ಬಿಸಿಲಿನ ಪ್ರಮಾಣ ಹೆಚ್ಚಾಗಿರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ‌ ತರಕಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ.‌ ಅಲ್ಲದೇ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿರುವ ಕಾರಣ ಈ ವಾರ ಕೂಡ ಬೆಲೆ‌ ಗಗನಕ್ಕೇರಿದೆ.

ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದರಿಂದ ಮತ್ತು ಮಳೆ ಕೊರತೆಯಿಂದ ಹೆಚ್ಚಿನ ಪ್ರಮಾಣದಲ್ಲಿ‌ ಫಸಲು ಬಂದಿಲ್ಲ. ಈ ಮಧ್ಯೆ, ಕಳೆದ ಒಂದು ವಾರದಿಂದ ಅಕಾಲಿಕವಾಗಿ ಮಳೆಯೂ‌ ಬರುತ್ತಿದ್ದು, ಬೆಳೆ ಹಾಳಾಗುತ್ತಿದೆ. ಹೀಗಾಗಿ ಬರುವ ಅಲ್ಪ ತರಕಾರಿಗಳಿಗೆ ಹೆಚ್ಚಿನ ಬೆಲೆ ನಿಗದಿ ಮಾಡಿ ಮಾರಾಟ‌ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರಿಯಾಗಿ ಮಳೆಯಾಗದಿದ್ದರೆ ತರಕಾರಿಗಳ‌ ಬೆಲೆ‌ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ‌. ಮಾರುಕಟ್ಟೆಗಳಲ್ಲಿ ಸ್ವಲ್ಪ ಪರವಾಗಿಲ್ಲವೆಂಬ ಬೆಲೆ ಇದ್ದರೂ ಬಡವಾಣೆಗಳ, ಮನೆಗಳ ಬಳಿಯ ತರಕಾರಿ ಅಂಗಡಿಗಳು, ತಳ್ಳುವ ಗಾಡಿ ವ್ಯಾಪಾರಸ್ಥರು, ಹಾಪ್ ಕಾಮ್ಸ್​​​​ಗಗಳಲ್ಲಿ ಬೆಲೆ ವಿಪರೀತ ಹೆಚ್ಚಾಗಿದೆ ಎಂದು ವ್ಯಾಪಾರಸ್ಥರು‌ ಹೇಳುತ್ತಿದ್ದಾರೆ.

ಯಾವ ತರಕಾರಿಗೆ ಎಷ್ಟಿದೆ ಬೆಲೆ?

ತರಕಾರಿ – ಹಿಂದಿನ ಬೆಲೆ – ಈಗಿನ ಬೆಲೆ (ಕೆಜಿಗೆ ರೂಪಾಯಿಗಳಲ್ಲಿ)

  • ಕ್ಯಾರೇಟ್ – 80 – 82
  • ಬೀನ್ಸ್ – 220 – 220
  • ನವಿಲುಕೋಸು – 60 – 102
  • ಬದನೆಕಾಯಿ – 60 – 70
  • ದಪ್ಪ ಮೆಣಸಿನಕಾಯಿ – 40 – 65
  • ಬಟಾಣಿ – 140 – 180
  • ಬೆಂಡೆಕಾಯಿ – 60 – 66
  • ಟೊಮಾಟೋ – 30 – 60
  • ಆಲೂಗೆಡ್ಡೆ -30 – 56
  • ಹಾಗಲಕಾಯಿ – 60 – 82
  • ಸೋರೆಕಾಯಿ – 40 – 50
  • ಬೆಳ್ಳುಳ್ಳಿ – 300 – 338
  • ಶುಂಠಿ – 180 – 195
  • ಪಡುವಲಕಾಯಿ – 30 – 60
  • ಗೋರಿಕಾಯಿ – 50 – 89
  • ಹಸಿ ಮೆಣಸಿಕಾಯಿ – 80 – 106
  • ಬಿಟ್ರೋಟ್ – 40 – 46
  • ಈರುಳ್ಳಿ – 20 – 39

ಕಡಿಮೆಯಾದ ವ್ಯಾಪಾರ

ಹೊಸ ಬೆಳೆ ಬರುವರೆಗೂ ಬೆಲೆ‌ ಹೀಗೆ‌ ಮುಂದುವರೆಯಲಿದೆ.‌ ಆದರೆ ತರಕಾರಿಗಳ‌ ಬೆಲೆ ಕೇಳಿ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಒಂದು ಕೆಜಿ ಖರೀದಿಸುವವರು ಅರ್ಧ ಕೆಜಿ ಖರೀದಿ‌ ಮಾಡುತ್ತಿದ್ದಾರೆ. ವ್ಯಾಪಾರ ತುಂಬ ಕಡಿಮೆಯಾಗಿದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.

ನಾಟಿ ಕೊತ್ತಂಬರಿ ಸೊಪ್ಪು ದರ 100 ರೂ!

ವಿಜಯ ನಗರವೂ ಸೇರಿದಂತೆ ನಗರದ ವಿವಿಧೆಡೆ ಒಂದು ಕಟ್ಟು ನಾಟಿ ಕೊತ್ತಂಬರಿ ಸೊಪ್ಪು ಬರೋಬ್ಬರಿ 100 ರೂಪಾಯಿಗೆ ಮಾರಾಟವಾಗುತ್ತಿದೆ.

200 ರೂ. ಗಡಿ ದಾಟಿದ ಬೀನ್ಸ್ ದರ

ಕಳೆದ ವಾರವೇ ಬೀನ್ಸ್ ಬೆಲೆ 200 ರೂ. ಗಡಿದಾಟಿತ್ತು. ಇದೀಗ 220 ರೂ. ಹಾಗೂ ಅದಕ್ಕಿಂತಲೂ ಹೆಚ್ಚು ದರದಲ್ಲಿ ಮಾರಾಟವಾಗುತ್ತಿದೆ. ಈ ಮಧ್ಯೆ ಸೌತೆಕಾಯಿ ಹಾಗೂ ಲಿಂಬೆಹಣ್ಣಿನ ಬೆಲೆ ಕೂಡ ವಿಪರೀತ ಜಾಸ್ತಿಯಾಗಿ ಹೋಗಿದೆ. ತರಕಾರಿ ಬೆಲೆ ನಿಯಂತ್ರಣದ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಸರಿಯಾಗಿ ಮಳೆಯಾಗದಿದ್ದರೆ ತರಕಾರಿ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.