ವಿಮಾನ ಹತ್ತದೆ ಅಲ್ಲೇ ಉಳಿದುಕೊಂಡ ಪ್ರಜ್ವಲ್, ಎಸ್​ಐಟಿಗೆ ನಿರಾಸೆ!

ಬೆಂಗಳೂರು, ಮೇ 15 : ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ ಎಸ್‌ಐಟಿ ಮೋಸ್ಟ್ ವಾಂಟೆಡ್‌ ಲಿಸ್ಟ್‌ನಲ್ಲಿರುವ ಸಂಸದ ಪ್ರಜ್ವಲ್‌ ರೇವಣ್ಣ, ಇಂದು (ಮೇ 15) ಜರ್ಮನಿಯಿಂದ ಬೆಂಗಳೂರಿಗೆ ಆಗಮಿಸುತ್ತಾರೆ ಎನ್ನುವ ಸುದ್ದಿ ಇತ್ತು. ಇದಕ್ಕೆ ಪೂರಕವೆಂಬಂತೆ ಪಜ್ವಲ್​ ಫ್ಲೈಟ್​ ಟಿಕೆಟ್​ ಸಹ ಬುಕ್ ಮಾಡಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಎಸ್​ಐಟಿ ಅಧಿಕಾರಿಗಳು ಪ್ರಜ್ವಲ್​ಗಾಗಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದಾರೆ. ಆದ್ರೆ, ಪ್ರಜ್ವಲ್ ರೇವಣ್ಣ, ಕೊನೆ ಕ್ಷಣದಲ್ಲಿ ಮತ್ತೊಮ್ಮೆ ಜಮರ್ನಿಯಿಂದ ವಿಮಾನ ಹತ್ತದೇ ಅಲ್ಲೇ ಉಳಿದುಕೊಂಡಿದ್ದಾರೆ. ಈ ಮೂಲಕ ವಿದೇಶದಲ್ಲಿದ್ದುಕೊಂಡು ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾರೆ.

ಪ್ರಜ್ವಲ್ ರೇವಣ್ಣ ಅವರು ಜರ್ಮನ್ ಕಾಲಮಾನದ ಪ್ರಕಾರ ಇಂದು (ಮೇ 15) 12.20ರ ವಿಮಾನದ ಟಿಕೆಟ್​ ಬುಕ್ ಮಾಡಿದ್ದರು. ಆದ್ರೆ, ಪ್ರಜ್ವಲ್​ ಕೊನೆ ಕ್ಷಣದಲ್ಲಿ ವಿಮಾನ ಹತ್ತದೇ ಮತ್ತೊಮ್ಮೆ ಬೆಂಗಳೂರು ಪ್ರಯಾಣವನ್ನು ರದ್ದು ಮಾಡಿದ್ದಾರೆ. ಪ್ರಜ್ವಲ್ ಬುಕ್ ಮಾಡಿದ್ದ ವಿಮಾನ ಈಗಾಗಲೇ ಜರ್ಮಿನಿಂದ ಟೇಕಾಫ್ ಆಗಿದೆ. ಆದ್ರೆ, ಪ್ರಜ್ವಲ್ ವಿಮಾನದಲ್ಲಿ ಬೋರ್ಡಿಂಗ್ ಆಗದೆ ಅಲ್ಲೇ ಉಳಿದುಕೊಂಡಿದ್ದಾರೆ. ಪ್ಯಾಸೆಂಜರ್ ಲಿಸ್ಟ್​ನಲ್ಲಿ ಪ್ರಜ್ವಲ್​ ರೇವಣ್ಣ ಅವರ ಹೆಸರು ಸಹ ಇಲ್ಲ ಎಂದು ತಿಳಿದು ಬಂದಿದೆ.

ಪ್ರಜ್ವಲ್​ ರೇವಣ್ಣ ಈಗಾಗಲೇ ಒಂದು ಸಲ ಟಿಕೆಟ್​ ಬುಕ್ ಮಾಡಿ ವಿಮಾನ ಹತ್ತದೇ ಅಲ್ಲೇ ಉಳಿದುಕೊಂಡಿದ್ದರು. ಇದೀಗ ಮತ್ತೊಮ್ಮೆ ಟಿಕೆಟ್​ ಬುಕ್ ಮಾಡಿದರೂ ಪ್ರಯಾಣ ಮಾಡದ ಜರ್ಮನಿಯಲ್ಲೇ ಉಳಿದುಕೊಂಡಿದ್ದಾರೆ. ತಂದೆ ರೇವಣ್ಣಗೆ ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿ ಬೆಂಗಳೂರಿಗೆ ಬರಲು ಟಿಕೆಟ್​ ಬುಕ್ ಮಾಡಿಕೊಂಡಿದ್ದರು. ಆದ್ರೆ, ಅದೇನಾಯ್ತೋ ಏನು ಮತ್ತೊಮ್ಮೆ ಬರದೇ ವಿದೇಶದಲ್ಲಿದ್ದುಕೊಂಡು ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾರೆ. ಪ್ರಜ್ವಲ್​ ವಿದೇಶದ ಕುಳಿತುಕೊಂಡೇ ವಕೀಲರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದ್ದು, ವಕೀಲರು ನೀಡುತ್ತಿರುವ ಸಲಹೆ ಸೂಚನೆಗಳನ್ನು ಪ್ರಜ್ವಲ್ ಪಾಲನೆ ಮಾಡುತ್ತಿದ್ದಾರೆ. ವಕೀಲರು ಯಾವಾಗ ಬರಲು ಹೇಳುತ್ತಾರೋ ಅಂದು ಪ್ರಜ್ವಲ್​​ ಬೆಂಗಳೂರಿಗೆ ಬಂದಿಳಿಯಲಿದ್ದಾರೆ ಎನ್ನಲಾಗಿದೆ.