ಅಯೋಧ್ಯೆಯಲ್ಲಿ ರಾಮನವಮಿ ಸಂಭ್ರಮ – ಬಾಲರಾಮನ ಹಣೆಯ ಮೇಲೆ ಸೂರ್ಯತಿಲಕ – ರಾಮಜನ್ಮಭೂಮಿಯಲ್ಲಿ ಭಕ್ತರ ಸಂಭ್ರಮ ಸಡಗರ

ನಾಡಿನೆಲ್ಲೆಡೆ ರಾಮನವಮಿ ಸಂಭ್ರಮ. ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಸೂರ್ಯಕಿರಣ ಭಗವಾನ್ ಶ್ರೀರಾಮನ ಹಣೆಯಲ್ಲಿ ತಿಲಕದಂತೆ ಕಂಗೊಳಿಸಿದ ಅಪೂರ್ವ ಘಳಿಗೆಯನ್ನು ಅಪಾರ ಭಕ್ತರು ಕಣ್ತುಂಬಿಕೊಂಡು ಪುನೀತರಾದರು…

ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮ ವಿರಾಜಮಾನನಾಗಿರುವ ನಂತರ ಬರುವ, ಮೊದಲ ರಾಮನವಮಿಯನ್ನು ವಿಶೇಷವಾಗಿ ಆಚರಿಸಲಾಯ್ತು. ರಾಮ ಮಂದಿರದಲ್ಲಿ ವಿರಾಜಮಾನನಾದ ಬಾಲರಾಮನಿಗೆ ಅಭಿಷೇಕ, ವಿಶೇಷ ಪೂಜೆಗಳು ನಡೆದವು. ಇನ್ನು ರಾಮಜನ್ಮಭೂಮಿಯಲ್ಲಿ ಭಕ್ತರ ಸಂಭ್ರಮ ಸಡಗರ ಮುಗಿಲುಮುಟ್ಟಿತ್ತು…

ಇನ್ನು ರಾಮ ನವಮಿಯನ್ನು ವಿಶೇಷವಾಗಿ ಆಚರಿಸಲು ರಾಮನ ಹಣೆ ಮೇಲೆ ಮೇಲೆ ಸೂರ್ಯನ ಕಿರಣಗಳನ್ನು ಅಭಿಷೇಕ ಮಾಡಲು ಸೂರ್ಯ ತಿಲಕ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ಸರ್ವಾಲಂಕೃತ ಬಾಲರಾಮನ ಹಣೆಗೆ ಮುತ್ತಿಟ್ಟ ಸೂರ್ಯಕಿರಣಗಳು ಅಲ್ಲಿ ಸೂರ್ಯತಿಲಕವನ್ನು ಮೂಡಿಸಿದವು. ಇದನ್ನು ನೋಡಿದ್ದ ಭಕ್ತರು ಜೈಶ್ರೀರಾಮ್ ಎಂದು ಘೋಷಣೆಗಳನ್ನು ಕೂಗಿದ್ರು…

ಸುಮಾರು ನಾಲ್ಕು ನಿಮಿಷಗಳ ಕಾಲ ಸೂರ್ಯರಶ್ಮಿ ತಿಲಕದಂತೆ ರಾಮನ ಹಣೆಮೇಲೆ ಕಂಗೊಳಿಸಿತು. ಕಳೆದ ವಾರ ಬಾಲರಾಮನ ಹಣೆಗೆ ಸೂರ್ಯತಿಲಕವಬಿಡುವ ಪ್ರಯೋಗ ಮಾಡಲಾಗಿತ್ತು. ರಾಮನವಮಿಯಂದು ರಾಮ ಜನಿಸಿದ ಸಮಯಕ್ಕೆ ಸರಿಯಾಗಿ ಸೂರ್ಯನ ಕಿರಣ ಹಣೆಯನ್ನು ಸ್ಪರ್ಷಿಸಿದೆ..

ರಾಮಮಂದಿರದ ಮೂರನೇ ಮಹಡಿಯಲ್ಲಿ ಆಪ್ಟಿಕಲ್‌ ಲೆನ್ಸ್‌ವೊಂದನ್ನು ಅಳವಡಿಸಲಾಗಿದ್ದು ಅದು ಪೈಪ್‌ಗಳಲ್ಲಿ ಅಳವಡಿಸಿರುವ ರಿಪ್ಲೆಕ್ಟರ್‌ಗಳ ಮೂಲಕ ಬೆಳಕನ್ನು ವಿಗ್ರಹದ ಹಣೆಯ ಮೇಲೆ ಮೂಡಿಸಿದೆ. ಇನ್ನು ಲೋಕಸಭೆ ಚುನಾವಣಾ ಪ್ರಚಾರದ ನಡುವೆ ಪ್ರಧಾನಿ ನರೇಂದ್ರ ಮೋದಿ, ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲೇ ಅಯೋಧ್ಯೆಯ ಬಾಲರಾಮನ ಹಣೆಗೆ ಸೂರ್ಯತಿಲಕ ಸ್ಪರ್ಷಿಸಿದ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ…