ಹೊನ್ನಾವರದಲ್ಲಿ 144 ಸೆಕ್ಷನ್‌ ಜಾರಿ – ಪೊಲೀಸ್ ಬಿಗಿ ಬಂದೋಬಸ್ತ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ (Honnavara) ಕಾಸರಕೋಡ ಟೊಂಕಾ ಬಂದರು (Tonka Port) ಪ್ರದೇಶದಲ್ಲಿ144 ಸೆಕ್ಷನ್ ಜಾರಿ ಮಾಡಿ ಜಿಲ್ಲಾ ದಂಡಾಧಿಕಾರಿ ಗಂಗೂಬಾಯಿ ಮಾನಕರ್ ಆದೇಶ ಪ್ರಕಟಿಸಿದ್ದಾರೆ.

ಖಾಸಗಿ ಬಂದರು ಕಾಮಗಾರಿಗೆ ಸ್ಥಳೀಯ ಮೀನುಗಾರರು (Local Fishermen) ತಡೆಯೊಡ್ಡಿದ ಹಿನ್ನಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ

ಬಂದರು ಕಾಮಗಾರಿಗೆ ಬಂದ ಕಾರ್ಮಿಕರ ಮೇಲೆ ಕಲ್ಲು ತೂರಾಟ ಮಾಡಿ ಕೆಲಸಗಾರರಿಗೆ ಅಡ್ಡಿ ಪಡಿಸಿ ಜೀವ ಬೆದರಿಕೆ ಹಾಕಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಆದೇಶ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಕಳೆದ ಮೂರು ವರ್ಷದಿಂದ ಖಾಸಗಿ ಬಂದರು ಕಾಮಗಾರಿ ನಡೆಸದಂತೆ ಪ್ರತಿಭಟನೆ (Protest) ನಡೆಸುತ್ತಿರುವ ಸ್ಥಳೀಯ ಮೀನುಗಾರರು ಪೊಲೀಸರಿಂದ ಏಟು ತಿಂದು ಜೈಲುವಾಸ ಸಹ ಅನುಭವಿಸಿದ್ದರು.

ಟೊಂಕಾದಲ್ಲಿ ಅವೈಜ್ಞಾನಿಕ ಖಾಸಗಿ ಬಂದರು ಕಾಮಗಾರಿ ನಡೆಸಬಾರದು ಎಂದು ಸ್ಥಳೀಯ ಮೀನುಗಾರರು ಹೋರಾಟ ನಿರಂತರ ನಡೆಯುತ್ತಲೇ ಇದೆ. ಈ ಭಾಗದಲ್ಲಿ ಆಮೆಗಳು ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಆಮೆಗಳ ಮೊಟ್ಟೆ ಇಡುವ ಸ್ಥಳವಾಗಿದೆ. ಇದಲ್ಲದೇ ಸಂಪ್ರದಾಯಿಕ ಮೀನುಗಾರರು ಇಲ್ಲಿ ಜೀವನ ಕಂಡುಕೊಂಡಿದ್ದು ಒಕ್ಕಲೆಬ್ಬಿಸಿ ಖಾಸಗಿಯವರಿಗೆ ನೀಡಿರುವುದು ಸರಿಯಲ್ಲ ಎಂದು ನಿರಂತರ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ.

ಹಲವು ಸುತ್ತಿನ ಸಂಧಾನ ಮಾತುಕತೆ ನಂತರ ಇದೀಗ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದ್ದು ಇದರ ಮುಂದುವರೆದ ಭಾಗವಾಗಿ ಮಾರ್ಚ್‌ 29 ರಿಂದ ಎಪ್ರಿಲ್ 5ರ ವರೆಗೆ 144 ಸೆಕ್ಷನ್‌ ಜಾರಿ ಮಾಡಲಾಗಿದೆ.