ಏನ್‌ ಡಾಕ್ಟ್ರೇ ಹೇಗಿದ್ದೀರಾ?: ಬಿಜೆಪಿ ಸೇರಿದ ಡಾ. ಮಂಜುನಾಥ್‌ ಕುಶಲ ವಿಚಾರಿಸಿದ ಮೋದಿ

Dr CN Manjunath : ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್‌. ಮಂಜುನಾಥ್‌ ಅವರು ಸೋಮವಾರ ಶಿವಮೊಗ್ಗದಲ್ಲಿ ಬಿಜೆಪಿ ಸೇರಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಮಾತನಾಡಿದರು.

ಶಿವಮೊಗ್ಗ, ಮಾರ್ಚ್‌ 18 : ಬೆಂಗಳೂರು ಗ್ರಾಮಾಂತರ‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಖ್ಯಾತ ಹೃದಯ ತಜ್ಞ ಡಾ. ಸಿ.ಎನ್‌. ಮಂಜುನಾಥ್‌ ಅವರು ಸೋಮವಾರ ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾರತೀಯ ಜನತಾ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಂಡರು. ಬಿಜೆಪಿ ಟಿಕೆಟ್‌ ಪಡೆದು ಸಭೆಗಳಲ್ಲಿ ಭಾಗವಹಿಸಿದ್ದರೂ ಅವರು ಇನ್ನೂ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿರಲಿಲ್ಲ. ಅವರು ಬೆಂಗಳೂರಿನಲ್ಲಿ ಬಿಜೆಪಿ ಸೇರುವುದೆಂದು ನಿಗದಿಯಾಗಿತ್ತು. ಆದರೆ, ಅವರು ಶಿವಮೊಗ್ಗಕ್ಕೆ ಹೋಗಿ ಅಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಸಮ್ಮುಖದಲ್ಲೇ ಪಕ್ಷ ಸೇರಿದರು.

ಶಿವಮೊಗ್ಗ ಅಲ್ಲಮ ಪ್ರಭು ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಡಾ. ಮಂಜುನಾಥ್‌ ಅವರು ಎದುರಾದಾಗ ಮೋದಿ ಅವರು ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ.

ʻಏನು ಡಾಕ್ಟ್ರೇ.. ಹೇಗಿದ್ದೀರಾ? ಚುನಾವಣೆಗೆ ಸ್ಪರ್ಧೆ ಮಾಡ್ತಾ ಇದ್ದೀರಿ. ನಿಮಗೆ ಒಳ್ಳೆಯದಾಗಲಿʼ ಎಂದು ಶುಭ ಹಾರೈಸಿದರು ಎಂದು ಡಾ. ಮಂಜುನಾಥ್‌ ಅವರು ಹೇಳಿಕೊಂಡಿದ್ದಾರೆ.

ನೀವು ಧೈರ್ಯವಾಗಿರಿ, ನಾವೆಲ್ಲರೂ ನಿಮ್ಮ ಜತೆಗಿದ್ದೇವೆ. ನಿಮಗೆ ಒಳ್ಳೆಯದಾಗುತ್ತದೆ ಎಂಬ ಮೋದಿ ಮಾತಿನಿಂದ ನನಗೆ ಆತ್ಮವಿಶ್ವಾಸ ಹೆಚ್ಚಾಗಿದೆ. ಈ ಆತ್ಮವಿಶ್ವಾಸದಿಂದಲೇ ಬೆಂಗಳೂರು ಗ್ರಾಮಾಂತರದಲ್ಲಿ ನಾನು ಗೆಲುವು ಸಾಧಿಸುತ್ತೇನೆ ಎಂದು ಹೇಳಿದರು.

ನಾನು ಬೆಂಗಳೂರಿನ ಕಾರ್ಯಕ್ರಮದಲ್ಲಿ ಬಿಜೆಪಿ ಸೇರ್ಪಡೆ ಆಗುವುದು ಎಂದು ನಿಗದಿಯಾಗಿತ್ತು. ಆದರೆ, ಇವತ್ತೇ ಶುಭ ಘಳಿಗೆ ಇದೆ ಎಂದು ಮನೆಯವರು ಹೇಳಿದರು. ಕಾಕತಾಳೀಯವೆಂಬಂತೆ ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗಕ್ಕೆ ಬರುವುದು ನಿಗದಿಯಾಗಿತ್ತು. ಹೀಗಾಗಿ ಇಲ್ಲಿಗೇ ಬಂದು ಪಕ್ಷ ಸೇರ್ಪಡೆಯಾದೆ ಎಂದು ಡಾ. ಮಂಜುನಾಥ್‌ ತಿಳಿಸಿದ್ದಾರೆ.

ಮೋದಿಗೆ ಪೇಟ ತೋಡಿಸಿದ ಡಾ. ಮಂಜುನಾಥ್‌
ಸಮಾರಂಭದಲ್ಲಿ ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ‌, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಗಳು ಭಾಗವಹಿಸಿದ್ದರು. ಬಿ.ವೈ ರಾಘವೇಂದ್ರ, ಗಾಯತ್ರಿ ಸಿದ್ದೇಶ್ವರ್‌, ಕ್ಯಾಪ್ಟನ್‌ ಬ್ರಿಜೇಶ್‌ ಚೌಟ, ಕೋಟ ಶ್ರೀನಿವಾಸ ಪೂಜಾರಿ ಅವರು ಮೋದಿ ಅವರನ್ನು ಶಾಲು ಮತ್ತು ಇತರ ವಸ್ತುಗಳನ್ನು ನೀಡಿ ಗೌರವಿಸಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿರುವ ಡಾ. ಮಂಜುನಾಥ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪೇಟ ತೊಡಿಸಿದರು.

ಪ್ರಧಾನಿ ಮೋದಿ ಅವರು ತಮ್ಮ ಭಾಷಣದ ಕೊನೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಡಾ. ಸಿ.ಎನ್‌ ಮಂಜುನಾಥ್‌ ಅವರಿಗೂ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ಪ್ರತಿಷ್ಠಿತ ಜಯದೇವ ಹೃದ್ರೋಗ ಸಂಸ್ಥೆಯನ್ನು ಮಾದರಿ ಆಸ್ಪತ್ರೆಯಾಗಿ ಕಟ್ಟಿ, ಅದರ ನಿರ್ದೇಶಕರಾಗಿ ನಿವೃತ್ತರಾದ ಡಾ. ಸಿ.ಎನ್‌. ಮಂಜುನಾಥ್‌ ಅವರನ್ನು ಮನವೊಲಿಸಿ ರಾಜಕೀಯಕ್ಕೆ ಕರೆ ತಂದಿದ್ದಾರೆ ಜೆಡಿಎಸ್‌ ನಾಯಕ ಎಚ್‌.ಡಿ ಕುಮಾರಸ್ವಾಮಿ. ಮಂಜುನಾಥ್‌ ಅವರು ಇಲ್ಲಿ ಹಾಲಿ ಸಂಸದ ಡಿ.ಕೆ. ಸುರೇಶ್‌ ಅವರನ್ನು ಎದುರಿಸುತ್ತಿದ್ದಾರೆ.