ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಕೇಸ್‌; ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ವಿಜಯೇಂದ್ರ ಆಗ್ರಹ

ಬೆಂಗಳೂರಿನ ನಗರತ್‌ಪೇಟೆಯ ಮೊಬೈಲ್‌ ಶಾಪ್‌ನಲ್ಲಿ ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಅಂಗಡಿ ಮಾಲೀಕನ ಮೇಲೆ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿತ್ತು.

ಬೆಂಗಳೂರು, ಮಾರ್ಚ್‌ 18 : ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಿಂದು ವ್ಯಾಪಾರಿ ಮೇಲೆ ಹಲ್ಲೆ ನಡೆಸಿರುವ ಘಟನೆಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ,ವಿಜಯೇಂದ್ರ (B.Y.Vijayendra) ತೀವ್ರವಾಗಿ ಖಂಡಿಸಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ, ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಬಳಿಕ ಇದೀಗ ಹನುಮಾನ್‌ ಚಾಲೀಸಾ ಹಾಕಿದ್ದ ಮೊಬೈಲ್‌ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಲಾಗಿದೆ. ಕಾಂಗ್ರೆಸ್‌ ಸರ್ಕಾರದ ತುಷ್ಟೀಕರಣ ರಾಜಕೀಯದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಕರ್ನಾಟಕವು ಮೂಲಭೂತವಾದಿಗಳ ರಾಜ್ಯವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಹಿಂದುಗಳ ಮೇಲೆ ದೌರ್ಜನ್ಯಕ್ಕೆ ಕಾಂಗ್ರೆಸ್‌ ಸರ್ಕಾರ ಹೊಣೆಯಾಗಿದ್ದು, ಸಿದ್ದರಾಮಯ್ಯ ಅವರು ತುಷ್ಟೀಕರಣ ರಾಜಕೀಯದಿಂದ ಅನಾಗರಿಕರು ಹಿಂಸಾಚಾರಕ್ಕೆ ಇಳಿಯುತ್ತಿದ್ದಾರೆ. ಬೆಂಗಳೂರು ನಗರ ಪೊಲೀಸರು ಯಾವುದೇ ಒತ್ತಡಗಳಿಗೆ ಒಳಗಾಗದೇ ಕೃತ್ಯ ಎಸಗಿದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಏನಿದು ಘಟನೆ?
ಬೆಂಗಳೂರಿನ ನಗರತ್‌ಪೇಟೆಯ ಮೊಬೈಲ್‌ ಶಾಪ್‌ನಲ್ಲಿ ಹನುಮಾನ್‌ ಚಾಲೀಸಾ ಹಾಕಿದ್ದನ್ನು ಪ್ರಶ್ನಿಸಿ ಅನ್ಯಕೋಮಿನ ಐದಾರು ಯುವಕರು ಮೊಬೈಲ್‌ ಶಾಪ್‌ನಲ್ಲಿದ್ದ ಯುವಕನಿಗೆ ಭಾನುವಾರ ಸಂಜೆ ಥಳಿಸಿದ್ದರು. ನಗರತ್‌ಪೇಟೆಯಲ್ಲಿರುವ ಮೊಬೈಲ್ ಸ್ಪೇರ್ ಪಾರ್ಟ್ಸ್ ಅಂಗಡಿ ಬಳಿ ಬಂದು ನಮಾಜ್ ಟೈಂನಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಕಿರಿಕ್‌ ತೆಗೆದಿದ್ದರು. ಈ ವೇಳೆ ಮುಖೇಶ್‌ ಎಂಬಾತನನ್ನು ಅಂಗಡಿಯಿಂದ ಹೊರಗೆಳೆದು ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದರು.

ಹಲ್ಲೆಗೊಳಗಾದ ಮುಖೇಶ್‌ ಕೂಡಲೇ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಆರಂಭದಲ್ಲಿ ಪೊಲೀಸರು ಎಫ್ಐಆರ್ ಮಾಡಲು ಹಿಂದೇಟು ಹಾಕುತ್ತಿದ್ದಾರೆಂದು ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ತಡರಾತ್ರಿ ಹಲಸೂರು ಗೇಟ್ ಪೊಲೀಸ್ ಠಾಣೆ ಮುಂದೆ ನೂರಾರು ಜನರು ಜಮಾಯಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಠಾಣೆ ಮುಂದೆ ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿತ್ತು. ಪೊಲೀಸರು ಎಫ್ಐಆರ್ ಮಾಡುವವರೆಗೂ ಇಲ್ಲಿಂದ ತೆರಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಜನಾಕ್ರೋಶ ಹೆಚ್ಚಾಗುತ್ತಿದ್ದಂತೆ ಪೊಲೀಸರು ಎಫ್‌ಐಆರ್‌ ದಾಖಲಿಸಿ, ಐವರನ್ನು ಬಂಧಿಸಿದ್ದರು.

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಮುಖೇಶ್‌, ಅಂಗಡಿಯಲ್ಲಿ ಭಜನೆ ಹಾಡುಗಳನ್ನು ಹಾಕಿದ್ದೆ. ಈ ವೇಳೆ ಅಂಗಡಿಗೆ ಬಂದ ಕೆಲ ಯುವಕರು ನಮಾಜ್‌ ಸಮಯದಲ್ಲಿ ಯಾಕೆ ಹಾಡು ಹಾಕುತ್ತೀಯಾ ಎಂದು ಪ್ರಶ್ನೆ ಮಾಡಿದರು. ಆರಂಭದಲ್ಲಿ ತಡೆಯುವ ಪ್ರಯತ್ನ ಮಾಡಿದೆ. ಆದರೆ ಸ್ಪೀಕರ್‌ನಿಂದ ನನ್ನ ತಲೆಗೆ ಹೊಡೆದು, ಎಳೆದಾಡಿ ಹಲ್ಲೆ ಮಾಡಿದರು ಎಂದು ತಿಳಿಸಿದ್ದಾರೆ.