ರಾಜ್ಯದಲ್ಲಿ ನೀತಿ ಸಂಹಿತೆ ಜಾರಿ; ರಾಜಕಾರಣಿಗಳು‌ ಟ್ಯಾಂಕರ್‌ ನೀರು ಪೂರೈಸುವಂತಿಲ್ಲ!

Lok Sabha Election 2024 : ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಇದರ ಪ್ರಕಾರ, ರಾಜಕಾರಣಿಗಳು ಟ್ಯಾಂಕರ್‌ ವಾಟರ್‌ ಪೂರೈಕೆ ಮೂಲಕ ಜನರನ್ನು ಸೆಳೆಯುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಬೆಂಗಳೂರು ಮಾರ್ಚ್‌ 16 : ದೇಶದಲ್ಲಿ ಲೋಕಸಭಾ ಚುನಾವಣೆಯ (Lok Sabha Election 2024) ವೇಳಾಪಟ್ಟಿ ಬಿಡುಗಡೆಯಾಗಿದೆ. ರಾಜ್ಯದಲ್ಲಿ ಏಪ್ರಿಲ್‌ 26 ಮತ್ತು ಮೇ 7 ಎರಡು ಹಂತಗಳಲ್ಲಿ ಮತದಾನ ನಿಗದಿಯಾಗಿದೆ. ರಾಜ್ಯದಲ್ಲಿ ಶನಿವಾರ (ಮಾರ್ಚ್‌ 16)ದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ (Election Code of Conduct). ವಿಶೇಷವೇನೆಂದರೆ ಈ ಬಾರಿ ನೀರಿಗೆ ತೀವ್ರ ತತ್ವಾರವಿದ್ದು, ಒಂದು ವೇಳೆ ಟ್ಯಾಂಕರ್‌ನಲ್ಲಿ ನೀರು ಪೂರೈಕೆ (Ban on providing Tanker Water) ಮಾಡಿ ಮತದಾರರ ಮನ ಗೆಲ್ಲಬಹುದು ಎಂದು ಭಾವಿಸಿದ್ದರೆ ಅದಕ್ಕೆ ಅವಕಾಶವಿಲ್ಲ!

ರಾಜ್ಯ ಮುಖ್ಯ ಚುನಾವಣಾಧಿಕಾರಿ (State Chief Election officer) ಮನೋಜ್ ಕುಮಾರ್ ಮೀನಾ (Manoj Kumar Meena) ಸುದ್ದಿಗೋಷ್ಠಿ ನಡೆಸಿ ಚುನಾವಣೆ ಯಶಸ್ವಿಯಾಗಿ ನಡೆಯಲು ತೆಗೆದುಕೊಂಡಿರುವ ಕ್ರಮಗಳು ಮತ್ತು ಸಾರ್ವಜನಿಕರು ವಹಿಸಬೇಕಾದ ಎಚ್ಚರಿಕೆಗಳ ವಿವರ ನೀಡಿದರು.

ಜನಪ್ರತಿನಿಧಿಗಳು ನಾನಾ ರೀತಿಯ ಆಮಿಷಗಳನ್ನು ಒಡ್ಡುವುದು, ಕುಕ್ಕರ್‌ ಮತ್ತಿತರ ಸೌಕರ್ಯಗಳನ್ನು ಒದಗಿಸುವುದರ ಮೇಲೆ ನಿಗಾ ವಹಿಸಲಾಗುತ್ತದೆ. ಬ್ಯಾಂಕ್ ಗಳಲ್ಲಿ‌ ನಡೆಯುವ ಡಿಜಿಟಲ್ ಟ್ರಾನ್ಸಾಕ್ಷನ್‌ ಮೇಲೆಯೂ ನಿಗಾ ವಹಿಸಲಾಗುತ್ತದೆ ಎಂದು ವಿವರಿಸಿದರು.

ರಾಜ್ಯದಲ್ಲಿ ಬರಗಾಲ, ನೀರಿನ ಕೊರತೆ ಇದೆ. ಹೀಗಾಗಿ ಕೆಲವು ರಾಜಕಾರಣಿಗಳು ಟ್ಯಾಂಕರ್‌ ನೀರು ಪೂರೈಕೆ ಮೂಲಕ ಮತದಾರರನ್ನು ಸೆಳೆಯುವ ಸಾಧ್ಯತೆ ಇರುತ್ತದೆ. ಆದರೆ, ರಾಜಕಾರಣಿಗಳು ಟ್ಯಾಂಕರ್ ಮೂಲಕ ನೀರು ವಿತರಿಸುವಂತಿಲ್ಲ. ಖಾಸಗಿಯಾಗಿ ಯಾರು ನೀರು, ಇತರ ವಸ್ತುಗಳನ್ನು ಪೂರೈಸುವಂತಿಲ್ಲ ಎಂದು ಚುನಾವಣಾಧಿಕಾರಿ ತಿಳಿಸಿದರು. ನೀರು ಪೂರೈಸುವ ಕೆಲಸವನ್ನು ಡಿಸಿ, ಎಸಿ, ತಹಸೀಲ್ದಾರ್ ನೋಡಿಕೊಳ್ತಾರೆ. ರಾಜಕಾರಣಿಗಳು ಮಾಡಿದರೆ ಅದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಆಯೋಗ ಹೇಳಿದೆ.

ಚುನಾವಣಾ ಅಕ್ರಮ ತಡೆಯಲು ಗಡಿಗಳಲ್ಲಿ‌ ಚೆಕ್‌ ಪೋಸ್ಟ್, ಪ್ಲೈಯಿಂಗ್ ಸ್ವ್ಯಾಡ್
ಚುನಾವಣಾ ಅಕ್ರಮ ತಡೆಗಾಗಿ ಈಗಾಗಲೇ ಪ್ಲೈಯಿಂಗ್ ಸ್ವ್ಯಾಡ್ ನೇಮಕ ಮಾಡಲಾಗಿದೆ. 2,357 ಪ್ಲೈಯಿಂಗ್ ಸ್ವ್ಕಾಡ್ ಗಳ ನೇಮಕ ಮಾಡಲಾಗಿದ್ದು, 647 ವಿಡಿಯೋ ಸರ್ವೈಲೆನ್ಸ್ ಟೀಂ, 258 ಅಕೌಂಟಿಂಗ್ ಟೀಂ, 257 ವಿಡಿಯೋ ವೀವಿಂಗ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದರು.

ನಮ್ಮ ರಾಜ್ಯದ ಸುತ್ತ ಆರು ರಾಜ್ಯಗಳ ಗಡಿ ಇದೆ. ಹಾಗಾಗಿ ಚೆಕ್ ಪೋಸ್ಟ್ ಗಳನ್ನ ರಚಿಸಲಾಗಿದೆ. ಕಳೆದ ಆರು ತಿಂಗಳಿಂದ ವಿಜಿಲೆನ್ಸ್ ಸ್ಟಾರ್ಟ್ ಮಾಡಿದ್ದು, ಪೊಲೀಸ್ ಇಲಾಖೆ, ಅಬಕಾರಿ, ಆದಾಯತೆರಿಗೆ, ವಾಣಿಜ್ಯ ತೆರಿಗೆ ಇಲಾಖೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ನಗದು ಸೇರಿದಂತೆ 537 ಕೋಟಿ ಮೌಲ್ಯದ ವಸ್ತುಗಳನ್ನ ಸೀಜ್ ಮಾಡಲಾಗಿದೆ ಎಂದು ವಿವರಿಸಿದರು. ರಾಜ್ಯದ ಯಾವುದೇ ಭಾಗದಲ್ಲೂ ಅವ್ಯವಹಾರ ನಡೆಯುತ್ತಿದ್ದರೆ ಚುನಾವಣಾ ಆಯೋಗದ ಗಮನಕ್ಕೆ ತರಬಹುದು ಎಂದರು.

ಸುವಿಧಾ ಆ್ಯಪ್ ಮೂಲಕವೇ ಅಭ್ಯರ್ಥಿಗಳಿಗೆ ಅನುಮತಿ
ಅಭ್ಯರ್ಥಿಗಳಿಗೆ ಸುವಿದಾ ಆ್ಯಪ್‌ ನೀಡಲಾಗುತ್ತದೆ. ಅವರಿಗೆ ಯಾವುದಕ್ಕೆ ಅನುಮತಿ ಬೇಕೋ, ಅದಕ್ಕೆ ನಾವು ಅನುಮತಿ ಕೊಡುತ್ತೇವೆ. ರ್‍ಯಾಲಿ, ಲ್ಯಾಂಡಿಂಗ್, ವೆಹಿಕಲ್​​ಗೆ ಅನುಮತಿ ಪಡೆಯಬೇಕು. ಸುವಿದಾ ಆ್ಯಪ್ ಮೂಲಕವೇ ಅರ್ಜಿ ಹಾಕಬೇಕು. ಇದು ಪಕ್ಷ, ಅಭ್ಯರ್ಥಿಗಳಿಗೆ ಅನ್ವಯವಾಗಲಿದೆ ಎಂದು ಚುನಾವಣಾಧಿಕಾರಿ ವಿವರಿಸಿದರು.

ಇವಿಎಂ ಮತ್ತು ವಿವಿ ಪ್ಯಾಟ್‌ಗಳ ಬಗ್ಗೆ ಡೌಟೇ ಬೇಡ
ಇವಿಎಂ, ವಿವಿಪ್ಯಾಟ್ ಗಳಿಗೆ ಸಂಬಂಧಿಸಿದ ಎರಡು ದೂರಗಳನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ. ಇವಿಎಂ, ವಿವಿಪ್ಯಾಟ್​ಗಳ ಬಗ್ಗೆ ಡೌಟ್ ಬೇಡ. ಎಲ್ಲಾ ಬೂತ್​ಗಳಲ್ಲಿ ವಿವಿಪ್ಯಾಟ್ ಇರಲಿದೆ ಎಂದು ಅವರು ವಿವರಿಸಿದರು.