ರಾಜ್ಯಸಭೆ ಸದಸ್ಯರಾಗಿ ಕನ್ನಡದಲ್ಲೇ ಪ್ರತಿಜ್ಞೆ ಸ್ವೀಕರಿಸಿದ ಸುಧಾ ಮೂರ್ತಿ; ನಾರಾಯಣಮೂರ್ತಿ ಸಾಥ್‌

ನವ ದೆಹಲಿ ಮಾರ್ಚ್‌ 13 : ರಾಜ್ಯಸಭೆಗೆ ನಾಮಕರಣಗೊಂಡಿರುವ ಇನ್ಫೋಸಿಸ್‌ ಸಂಸ್ಥಾಪಕಿ, ಉದಾರ ದಾನಿ, ಸಾಹಿತಿ, ಕನ್ನಡತಿ ಸುಧಾ ಮೂರ್ತಿ (Sudha Murthy) ಅವರು ರಾಜ್ಯಸಭೆ ಸದಸ್ಯರಾಗಿ (Rajya sabha Member) ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ಅವರು ಅತ್ಯಂತ ಸುಂದರ ಭಾಷೆಯಾದ, ಸೊಗಡಿನ ಭಾಷೆಯಾದ ಕನ್ನಡದಲ್ಲೇ ಪ್ರತಿಜ್ಞಾ ವಿಧಿಯನ್ನು (Sudha Murthy Takes oath in Kannada) ಓದುವ ಮೂಲಕ ಮೆಚ್ಚುಗೆ ಗಳಿಸಿದರು.

ರಾಜ್ಯಸಭೆಯ ಅಧ್ಯಕ್ಷರಾಗಿರುವ ಜಗದೀಪ್‌ ಧನಕರ್‌ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ರಾಜ್ಯಸಭೆಯಲ್ಲಿ ಬಿಜೆಪಿ ನಾಯಕರಾಗಿರುವ ಪಿಯೂಷ್‌ ಗೋಯಲ್‌ ಅವರು ಉಪಸ್ಥಿತರಿದ್ದರು. ಇದೆಲ್ಲದಕ್ಕಿಂತಲೂ ಮುಖ್ಯವಾಗಿ ಇನ್ಫೋಸಿಸ್‌ ಸ್ಥಾಪನೆಯಲ್ಲಿ ಜತೆಯಾಗಿದ್ದ, ಸುಧಾಮೂರ್ತಿ ಅವರ ಜೀವನ ಸಂಗಾತಿ ಎನ್‌.ಆರ್‌. ನಾರಾಯಣ ಮೂರ್ತಿ (NR Narayanamurthy) ಅವರು ಕೂಡಾ ಇದ್ದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನವಾದ ಮಾರ್ಚ್‌ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸುಧಾ ಮೂರ್ತಿ ಅವರನ್ನು ರಾಜ್ಯಸಭೆ ನಾಮಕರಣ ಮಾಡಲಾಗಿರುವ ಸಂಗತಿಯನ್ನು ಖುಷಿಯಿಂದ ಹಂಚಿಕೊಂಡಿದ್ದರು.

“ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶ್ರೀಮತಿ ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ ಎಂಬ ಮಾಹಿತಿಯನ್ನು ನಿಮ್ಮ ಜತೆ ಹಂಚಿಕೊಳ್ಳಲು ಖುಷಿಯಾಗುತ್ತಿದೆ. ಸಮಾಜಸೇವೆ, ಪರೋಪಕಾರ, ಶಿಕ್ಷಣಕ್ಕೆ ಕೊಡುಗೆ ಸೇರಿ ಹಲವು ದಿಸೆಯಲ್ಲಿ ಸುಧಾ ಮೂರ್ತಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ರಾಜ್ಯಸಭೆಯಲ್ಲಿ ಸುಧಾ ಮೂರ್ತಿ ಅವರ ಉಪಸ್ಥಿತಿಯು ನಾರಿಶಕ್ತಿಯ ದ್ಯೋತಕವಾಗಿರಲಿದೆ. ಹಾಗೆಯೇ, ಸಂಸತ್‌ನಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಳವಾಗುತ್ತಿರುವುದು ದೇಶದ ಅಭಿವೃದ್ಧಿಯ ಸಂಕೇತವಾಗಿದೆ. ಸುಧಾ ಮೂರ್ತಿ ಅವರಿಗೆ ಶುಭವಾಗಲಿ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಸುಧಾ ಮೂರ್ತಿ, ಇವರು ಸರಳತೆ, ಸಜ್ಜನಿಕೆಯ ಸಾಕಾರಮೂರ್ತಿ!

ಇನ್ಫೋಸಿಸ್‌ (Infosys Company) ಎಂಬ ಮಹಾಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಹೆಗಲೆಣೆಯಾಗಿ ದುಡಿದ, ಪರೋಪಕಾರ, ಸಜ್ಜನಿಕೆ, ವಿನಮ್ರತೆಗೆ ಮತ್ತೊಂದು ಹೆಸರಾಗಿ, ಎಲ್ಲರಿಂದಲೂ ಅಮ್ಮ ಎಂದೇ ಕರೆಸಿಕೊಳ್ಳುವ ಡಾ. ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ (Nominated to Rajya sabha) ಮಾಡಲಾಗಿದೆ. ಸರಳತೆ, ವಿನಮ್ರತೆಗಳನ್ನೇ ಆವಾಹಿಸಿಕೊಂಡ ಡಾ. ಸುಧಾ ಮೂರ್ತಿ (Dr Sudha Murthy) ಎಂಬ ಸಾತ್ವಿಕ ಸಾಧಕಿಯ ಬದುಕಿನ ಸಾಧನೆಯ ಹೆಜ್ಜೆ ಗುರುತುಗಳು ಇಲ್ಲಿವೆ.

Sudha Murthy ಎಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕ ಪಡೆದ ಏಕೈಕ ಮಹಿಳಾ ವಿದ್ಯಾರ್ಥಿನಿ
ಸುಧಾ ಮೂರ್ತಿ (ಹಿಂದೆ ಸುಧಾ ಕುಲಕರ್ಣಿ- Sudha Kulkarni)) ಅವರು ಹುಟ್ಟಿದ್ದು 1950ರ ಆಗಸ್ಟ್‌ 19ರಂದು. ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಗ್ರಾಮದ ಕುಲಕರ್ಣಿ ಮನೆತನ ಇವರದು. ಇವರ ತಂದೆ ರಾಮಚಂದ್ರ ಕುಲಕರ್ಣಿಯವರು ಹುಬ್ಬಳ್ಳಿಯ ಕೆ.ಎಂ.ಕಾಲೇಜಿನ ಸ್ತ್ರೀ ರೋಗ ತಜ್ಞರು ಮ್ತು ಪ್ರಾಧ್ಯಾಪಕರಾಗಿದ್ದರು. ತಾಯಿ ವಿಮಲಾ ಕುಲಕರ್ಣಿಯವರು ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದ ಸಾಧಕಿ.

ರಾಮಚಂದ್ರ ಕುಲಕರ್ಣಿ ಮತ್ತು ವಿಮಲಾ ಕುಲಕರ್ಣಿ ದಂಪತಿಯ ನಾಲ್ಕು ಮಕ್ಕಳಲ್ಲಿ ಇವರು ಒಬ್ಬರು ಸುಧಾ. ಹುಟ್ಟೂರಾದ ಶಿಗ್ಗಾಂವಿಯಲ್ಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆದ ಅವರು‌ ಎಸ್ಸೆಸ್ಸೆಲ್ಸಿಯಲ್ಲಿ ಗರಿಷ್ಠ ಅಂಕ ಪಡೆದು ಟಾಪರ್‌ ಆಗಿದ್ದರು.

1972ರಲ್ಲಿ ಹುಬ್ಬಳ್ಳಿಯ ಬಿ.ವಿ.ಬಿ. ಕಾಲೇಜ್‌ ಆಫ್ ಎಂಜಿನಿಯರಿಂಗ್‌ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ ಮಾಡಿದ ಅವರು, 1974ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಕಂಪ್ಯೂಟರ್ ಸೈನ್ಸ್‌ ಪದವಿ ಪೂರೈಸಿದರು. ಬೆಂಗಳೂರಿನ ಟಾಟಾ ಇನ್‌ಸ್ಟಿಟ್ಯೂಟ್‌ನಲ್ಲಿ ಎಮ್.ಇ (ಕಂಪ್ಯೂಟರ್ ಸೈನ್ಸ್) ಪದವಿ ಗಳಿಸಿದರು. ಟಾಟಾ ಸಂಸ್ಥೆಯಲ್ಲಿ ಚಿನ್ನದ ಪದಕ ಗಳಿಸಿದ ಏಕೈಕ ಮಹಿಳಾ ವಿದ್ಯಾರ್ಥಿನಿ ಇವರು.

ಟಾಟಾ ಕಂಪನಿಯಲ್ಲಿ ಉದ್ಯೋಗ ಪಡೆದ ಮೊದಲ ಮಹಿಳೆ!
ಸುಧಾ ಮೂರ್ತಿ ಅವರು ಟೆಲ್ಕೊದ ಪುಣೆ, ಮುಂಬಯಿ ಹಾಗು ಜಮ್ ಶೇಡ್ ಪುರ ಶಾಖೆಗಳಲ್ಲಿ ಡೆವಲಪ್ಮೆಂಟ್ ಎಂಜಿನಿಯರ್ ಆಗಿ ದುಡಿದಿದ್ದಾರೆ. ಟೆಲ್ಕೊಗೆ ಪ್ರವೇಶ ಪಡೆದ ಪ್ರಥಮ ಮಹಿಳಾ ಇಂಜನಿಯರ್ ಎನ್ನುವ ಹೆಗ್ಗಳಿಕೆ ಇವರದು. ಮುಂದೆ ಅವರು ಪುಣೆಯ ವಾಲಚಂದ್‌ ಗ್ರೂಪ್ ಆಫ್ ಇಂಡಸ್ಟ್ರೀಸ್‌ನಲ್ಲಿ ಸೀನಿಯರ್ ಸಿಸ್ಟಮ್ಸ್ ಅನಲಿಸ್ಟ್ ಆಗಿದ್ದರು.

ಇನ್ಫೋಸಿಸ್‌ ಎಂಬ ಮಹಾ ಕನಸು ನನಸಾದ ಬಗೆ..
1970ರ ಫೆಬ್ರವರಿ 10ರಂದು ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ಅವರ ವಿವಾಹ ನಡೆಯಿತು. ತಾವು ದುಡಿದ ಅಷ್ಟೂ ಹಣವನ್ನು, ತಮ್ಮಲ್ಲಿದ್ದ ಚಿನ್ನಾಭರಣಗಳೆಲ್ಲವನ್ನೂ ಮಾರಿ ಇನ್ಫೋಸಿಸ್‌ ಎಂಬ‌ ಸಾಫ್ಟ್‌ವೇರ್‌ ಸಂಸ್ಥೆಯನ್ನು ಕಟ್ಟಿದರು. ತಾವು ಹಗಲು ರಾತ್ರಿ ದುಡಿದು ಅದನ್ನು ಎತ್ತರಕ್ಕೆ ಬೆಳೆಸಿದರು. ಲಕ್ಷಾಂತರ ಮಂದಿಗೆ ಉದ್ಯೋಗ ನೀಡುವಷ್ಟು ಮಟ್ಟಕ್ಕೆ ಬೆಳೆಸಿದರು.

ಸಾರ್ವಜನಿಕ ಸೇವೆಯಲ್ಲಿ ಮಮತೆಯ ತಾಯಿಯಾದರು
ಎಂಜಿನಿಯರ್‌ ಆಗಿದ್ದರೂ, ದೊಡ್ಡ ಸಂಸ್ಥೆಯನ್ನೇ ಕಟ್ಟಿದರೂ ಅವರ ತುಡಿತ ಇದ್ದಿದ್ದು ಸಮಾಜಸೇವೆಯಲ್ಲಿ. ಹೀಗಾಗಿ ಅವರು 1996ರಲ್ಲಿ ಸಾರ್ವಜನಿಕ ಚಾರಿಟೇಬಲ್ ಟ್ರಸ್ಟ್ ಅನ್ನು ಸ್ಥಾಪಿಸಿದರು. ಸುಧಾ ಮೂರ್ತಿ ಅವರು ದೇವದಾಸಿಯರ ಬದುಕಿನಲ್ಲಿ ಬದಲಾವಣೆ ಮಾಡಿದರು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೆಲಸ ಮಾಡಿದರು. ಅವರ ಟ್ರಸ್ಟ್ ಇದುವರೆಗೆ 2,300 ಮನೆಗಳನ್ನು ನಿರ್ಮಿಸಿದೆ. ಟ್ರಸ್ಟ್​ ಮೂಲಕ ಶಾಲೆಗಳಲ್ಲಿ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ. ಇದುವರೆಗೆ 70,000 ಗ್ರಂಥಾಲಯಗಳನ್ನು ನಿರ್ಮಾಣಮಾಡಿದ್ದಾರೆ. ಇವರ ಸಂಸ್ಥೆ ಇದುವರೆಗೆ 16,000 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿದೆ.

ಅಪೂರ್ವ ಸಾಹಿತ್ಯ ಸೇವೆ, ಅವರು ಪುಸ್ತಕಗಳಿಂದಲೇ ಗಳಿಸಿದ್ದು 300 ಕೋಟಿ
ಸುಧಾ ಮೂರ್ತಿ ಅವರು ಸಾಧಕಿ, ಸಮಾಜಸೇವಕಿ ಮಾತ್ರವಲ್ಲ ಅಪರೂಪದ ಲೇಖಕಿ, ಬರಹಗಾರ್ತಿ. ಅವರು ಕನ್ನಡ ಮತ್ತು ಇಂಗ್ಲೀಷ್​ ಭಾಷೆಗಳಲ್ಲಿ ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ನಿಜವೆಂದರೆ, ಅವರು ಈಗಾಗಲೇ ಪುಸ್ತಕಗಳಿಂದಲೇ 300 ಕೋಟಿ ರೂ. ಆದಾಯ ಗಳಿಸಿದ್ದಾರೆ.

Sudha Murthy ಸುಧಾ ಮೂರ್ತಿಯವರ ಕನ್ನಡ ಕೃತಿಗಳು ಇವು
ಹಕ್ಕಿಯ ತೆರದಲಿ, ಶಾಲಾ ಮಕ್ಕಳಿಗಾಗಿ ಕಂಪ್ಯೂಟರ್, ಕಾವೇರಿಯಿಂದ ಮೇಕಾಂಗಿಗೆ, ಡಾಲರ್ ಸೊಸೆ, ಮಹಾಶ್ವೇತೆ, ಅತಿರಿಕ್ತೆ, ಪರಿಧಿ, ಮನದ ಮಾತು (ಅಂಕಣ ಬರಹಗಳ ಸಂಗ್ರಹ), ಗುಟ್ಟೊಂದು ಹೇಳುವೆ, ಸಾಮಾನ್ಯರಲ್ಲಿ ಅಸಾಮಾನ್ಯರು, ದಿ ಸರ್ಪೆಂಟ್ಸ್ ರಿವೇಂಜ್, ತುಮುಲ, ಋಣ, ಯಶಸ್ವಿ, ಸಾಫ್ಟ್ ಮನ, ಏರಿಳಿತದ ದಾರಿಯಲ್ಲಿ, ನೂನಿಯ ಸಾಹಸಗಳು