ಲೋಕಸಭಾ ಚುನಾವಣೆಗೆ ಬಿಜೆಪಿಯ ಎರಡನೇ ಪಟ್ಟಿ ಪ್ರಕಟವಾಗಿದೆ. ಪ್ರತಾಪ್ ಸಿಂಹಗೆ ಮೈಸೂರು-ಕೊಡಗು ಕ್ಷೇತ್ರದಲ್ಲಿ ಈ ಸಾರಿ ಟಿಕೆಟ್ ಮಿಸ್ ಆಗಿದೆ. ಇತ್ತ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ ಯದುವೀರ ಒಡೆಯರ್‌ಗೆ ಅಭಿನಂದನೆ ತಿಳಿಸಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು ಕೂಡ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಿಜೇಟ್ ಚೌಟಾಗೆ ಅಭಿನಂದಿಸಿದ್ದಾರೆ.
ಬೆಂಗಳೂರು, ಮಾರ್ಚ್ 13 : ತೀವ್ರ ಕುತೂಹಲ ಕೆರಳಿಸಿದ್ದ ಬಿಜೆಪಿ (BJP) ಎರಡನೇ ಪಟ್ಟಿ ಬುಧವಾರ ಬಿಡುಗಡೆ ಆಗಿದೆ. ಬಿಡುಗಡೆ ಆಗಿರುವ ಎರಡನೇ ಪಟ್ಟಿಯಲ್ಲಿ ಕರ್ನಾಟಕದ 20 ಮಂದಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ. ಈ ಬಾರಿ ಹಾಲಿ ಸಂಸದರಿಗೆ ಶಾಕ್ ಉಂಟಾಗಿದ್ದು ಹೊಸಬರಿಗೆ ಲಕ್ ಖುಲಾಯಿಸಿದೆ. 2ನೇ ಸಾರಿ ಗೆದ್ದು ಹ್ಯಾಟ್ರಿಕ್ ಗೆಲುವಿ ಕನಸು ಕಂಡಿದ್ದ ಪ್ರತಾಪ್ ಸಿಂಹಗೆ ಮೈಸೂರು-ಕೊಡಗು ಕ್ಷೇತ್ರದಲ್ಲಿ ಈ ಸಾರಿ ಟಿಕೆಟ್ ಕೈತಪ್ಪಿದೆ. ಬದಲಾಗಿ ಮೈಸೂರು ರಾಜಮನೆತನದ ಯದುವೀರ್ ಕೃಷ್ಣರಾಜ ಒಡೆಯರ್‌ಗೆ ಸಿಕ್ಕಿದೆ.
ಇತ್ತ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ ಯದುವೀರ ಒಡೆಯರ್‌ಗೆ ಅಭಿನಂದನೆ ತಿಳಿಸಿದ್ದಾರೆ. ಕೂಡಲೇ ಚುನಾವಣೆ ತಯಾರಿ ಆರಂಭಿಸೋಣ, ಪ್ರಚಾರಕ್ಕಿಳಿಯೋಣ ದೇಶಕ್ಕಾಗಿ, ಮೋದಿಗಾಗಿ ಎಂದು ಟ್ವೀಟ್ ಮಾಡಿದ್ದಾರೆ.
ಪಕ್ಷ ತೆಗೆದುಕೊಂಡಿರುವ ತೀರ್ಮಾನವನ್ನು ಸ್ವಾಗತಿಸುತ್ತೇನೆ ಎಂದ ನಳಿನ್ ಕುಮಾರ್ ಕಟೀಲು
ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಪ್ರತಿಕ್ರಿಯಿಸಿದ್ದು, ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಿಜೇಟ್ ಚೌಟಾಗೆ ಅಭಿನಂದಿಸುವೆ. ಕಳೆದ 15 ವರ್ಷಗಳಿಂದ ಪಕ್ಷ ನನಗೆ ಅವಕಾಶವನ್ನ ಕೊಟ್ಟಿದೆ. ಮತದಾರರು 15 ವರ್ಷಗಳಿಂದ ಆಶೀರ್ವಾದ ಮಾಡಿದ್ದಾರೆ. ರಾಜಕಾರಣಕ್ಕೆ ಯುವಕರು ಬರಬೇಕು. ಪಕ್ಷ ತೆಗೆದುಕೊಂಡಿರುವ ತೀರ್ಮಾನವನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.
ರಾಜ್ಯ ಘಟಕದ ಅಧ್ಯಕ್ಷನಾಗಿ ಕೆಲಸ ಮಾಡುವ ಅವಕಾಶ ಕೊಟ್ಟಿದೆ. ಪಕ್ಷದ ರಾಜ್ಯಾಧ್ಯಕ್ಷನಾಗಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಪಕ್ಷ ಏನು ಹೇಳುತ್ತೋ ಅದನ್ನ ಮಾಡುವವನು ನಾನು. ನನಗೆ ಕೊಟ್ಟ ಸಹಕಾರ ಕ್ಯಾ.ಬ್ರಿಜೇಶ್ ಚೌಟಾಗೆ ಕೊಡಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ನಳಿನ್ ಕುಮಾರ್ ಕಟೀಲು ಮನವಿ ಮಾಡಿದ್ದಾರೆ.
ಮೋದಿ ಅವರ ಕೈ ಬಲಪಡಿಸಬೇಕಿದೆ: ಬಿ.ವೈ ರಾಘವೇಂದ್ರ
ಶಿವಮೊಗ್ಗ ಲೋಕಸಭೆ ಟಿಕೆಟ್ ಸಿಕ್ಕ ಹಿನ್ನಲೆ ಬಿ.ವೈ ರಾಘವೇಂದ್ರ ಟಿವಿ 9ಗೆ ಪ್ರತಿಕ್ರಿಯಿಸಿದ್ದು, ಮತ್ತೊಮ್ಮೆ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ನನಗೆ ಈಗ ಜವಾಬ್ದಾರಿ ಹೆಚ್ಚಾಗಿದೆ. ಒಂದು ತಿಂಗಳ ಸಮಯ ಇದೆ. ಮತ್ತೆ ಕ್ಷೇತ್ರ ಗೆಲ್ಲಬೇಕು. ಮೋದಿ ಅವರ ಕೈ ಬಲಪಡಿಸಬೇಕಿದೆ ಎಂದರು.
ಮೋದಿ ಮತ್ತೆ ಪ್ರಧಾನಿ ಆಗುತ್ತಾರೆಂದು ಸಂಪೂರ್ಣ ವಿಶ್ವಾಸವಿದೆ: ಬಸವರಾಜ ಬೊಮ್ಮಾಯಿ
ಬೆಂಗಳೂರಿನಲ್ಲಿ ಟಿವಿ9ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಮೋದಿ ಮತ್ತೆ ಪ್ರಧಾನಿ ಆಗುತ್ತಾರೆಂದು ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ದಾರೆ.