5 ಮರಿಗಳಿಗೆ ಜನ್ಮ ನೀಡಿದ ಚೀತಾ ಗಾಮಿನಿ; ಇಲ್ಲಿದೆ ವಿಡಿಯೊ

Kuno National Park: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಭಾನುವಾರ ಗಾಮಿನಿ ಹೆಸರಿನ ಚೀತಾ 5 ಮರಿಗಳಿಗೆ ಜನ್ಮ ನೀಡಿದೆ. ಆ ಮೂಲಕ ದೇಶದಲ್ಲಿ ಚೀತಾಗಳ ಸಂಖ್ಯೆ 26ಕ್ಕೆ ಏರಿದೆ.

ಭೋಪಾಲ್‌ ಮಾರ್ಚ್‌ 10 : ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ಭಾನುವಾರ ಗಾಮಿನಿ (Gamini) ಹೆಸರಿನ ಚೀತಾ (Cheetah) 5 ಮರಿಗಳಿಗೆ ಜನ್ಮ ನೀಡಿದೆ. ಈ ಮೂಲಕ ದೇಶದಲ್ಲಿ ಚೀತಾಗಳ ಸಂಖ್ಯೆ 26ಕ್ಕೆ ಏರಿದೆ. ಈ ಬಗ್ಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್‌ ಯಾದವ್‌ (Bhupender Yadav) ಮಾಹಿತಿ ನೀಡಿದ್ದಾರೆ.

ʼʼಹೈ ಫೈವ್‌ ಕುನೊ ! ದಕ್ಷಿಣ ಆಫ್ರಿಕಾದ ತ್ಸ್ವಾಲು ಕಲಹರಿ ಮೀಸಲು ಅರಣ್ಯ ಪ್ರದೇಶದಿಂದ ಕರೆ ತರಲಾದ ಸುಮಾರು 5 ವರ್ಷದ ಚೀತಾ ಗಾಮಿನಿ ಇಂದು 5 ಮರಿಗಳಿಗೆ ಜನ್ಮ ನೀಡಿದೆ. ಈ ಮೂಲಕ ಭಾರತದಲ್ಲಿ ಜನಿಸಿದ ಚೀತಾ ಮರಿಗಳ ಸಂಖ್ಯೆ 13ಕ್ಕೇರಿದೆʼʼ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ʼʼಚೀತಾಗಳಿಗೆ ಒತ್ತಡ ರಹಿತ ಮತ್ತು ಉತ್ತಮ ವಾತಾವರಣ ಒದಗಿಸಿದ ಅರಣ್ಯಾಧಿಕಾರಿಗಳು, ಪಶು ವೈದ್ಯರು ಮತ್ತು ಸಿಬ್ಬಂದಿ ಸೇರಿ ಎಲ್ಲರೂ ಅಭಿನಂದನಾರ್ಹರು. ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಈಗ ಮರಿಗಳೂ ಸೇರಿದಂತೆ ಒಟ್ಟು 26 ಚೀತಾಗಳಿವೆ. ಗಾಮಿನಿಯ ವಂಶ ಮುಂದುವರಿಯುತ್ತಿದೆ. ಆಕೆಯ ಮುದ್ದಾದ ಮರಿಗಳ ವಿಡಿಯೊ ಇಲ್ಲಿದೆʼʼ ಎಂದು ಹೇಳಿದ್ದಾರೆ. ಜತೆಗೆ ಫೋಟೊ, ವಿಡಿಯೊಗಳನ್ನು ಹಂಚಿಕೊಂಡಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ.

ನಮ್ಮ ದೇಶದಲ್ಲಿ ನಶಿಸುತ್ತಿರುವ ಚೀತಾಗಳ ಸಂತತಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ತರಲಾಗಿದೆ. ಮಹತ್ವಾಕಾಂಕ್ಷೆಯ ಚೀತಾ ಮರು ಪರಿಚಯ (Cheetah reintroduction) ಯೋಜನೆಯಡಿ ಐದು ಹೆಣ್ಣು ಮತ್ತು ಮೂರು ಗಂಡು ಚೀತಾಗಳನ್ನು 2022ರ ಸೆಪ್ಟೆಂಬರ್ 17ರಂದು ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಲಾಯಿತು. 2023ರ ಫೆಬ್ರವರಿ ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚೀತಾಗಳನ್ನು ಕರೆ ತರಲಾಗಿತ್ತು.

1952ರಲ್ಲಿಯೇ ಭಾರತದಲ್ಲಿ ಚೀತಾ ಸಂತತಿ ಅಳಿದಿದೆ ಎಂದು ಘೋಷಿಸಲಾಗಿತ್ತು. ಆದಾಗ್ಯೂ 1947ರಲ್ಲಿಯೇ ಛತ್ತೀಸ್‌ಗಢದಲ್ಲಿ ಮಹಾರಾಜ ರಾಮಾನುಜ ಪ್ರತಾಪ್‌ ಸಿಂಗ್‌ ಅವರು ಬೇಟೆಯಾಡಿದ ಚೀತಾವೇ ದೇಶದ ಕೊನೆಯ ಸಂತತಿ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಚೀತಾ ಸಂತತಿಯನ್ನು ಪುನರುಜ್ಜೀವನಗೊಳಿಸಲು ಕರೆ ತರಲಾಗಿದೆ.

ಚೀತಾವನ್ನು ಭಾರತಕ್ಕೆ ಕರೆತಿರುವ ಯೋಜನೆಯ ಬಗ್ಗೆ ಮಾತನಾಡಿದ್ದ ಚೀತಾ ಸಂರಕ್ಷಣಾ ನಿಧಿ ಪ್ರಧಾನ ನಿರ್ದೇಶಕಿ ಹಾಗೂ ನಮಿಬಿಯಾದಿಂದ ಭಾರತಕ್ಕೆ ಚೀತಾ ಕರೆ ತರುವ ಕಾರ್ಯಕ್ಕೆ ಸಮನ್ವಯಕಾರರಾಗಿದ್ದ ಲಾರಿ ಮಾರ್ಕರ್, ʼʼಮಾನವರಿಂದಲೇ ಚೀತಾಗಳು ಸಂತತಿ ಅಳಿದಿದೆ ಮತ್ತು ಇದೇ ಮಾನವರಿಂದ ಅವುಗಳ ಸಂತತಿ ವೃದ್ಧಿಯಾಗಲಿದೆ. ಜೀವನದ ವರ್ತುಲದಲ್ಲಿ ಅವು ಕೊಂಡಿಗಳಾಗಿವೆ. ಇಂದಿನ ಸ್ಥಿತಿಯಲ್ಲಿ ಭೂಮಿ ನಾಶವಾಗುತ್ತಿರುವ ಸಂದರ್ಭದಲ್ಲಿ ಚೀತಾಗಳು ಪ್ರಮುಖ ಪಾತ್ರ ನಿರ್ವಹಿಸಲಿವೆ. ಚೀತಾ ಮತ್ತು ನಾವು ಮಾತ್ರವೇ ಈ ಭೂಮಿಯನ್ನು ಸಂರಕ್ಷಿಸಬಲ್ಲವು. ಈ ಸಂಗತಿಯನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆʼʼ ಎಂದು ತಿಳಿಸಿದ್ದರು. ಚೀತಾ ಮರು ಸ್ಥಳಾಂತರ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಕಳೆದ 12 ವರ್ಷಗಳಿಂದಲೂ ಲಾರಿ ಮಾರ್ಕರ್ ಅವರು ಭಾರತ ಸರ್ಕಾರಕ್ಕೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.