ಬೈಂದೂರು: ಶಾಲೆ ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ಕಾಲುಸಂಕ ದಾಟುವಾಗ ಆಯತಪ್ಪಿ 2 ನೇ ತರಗತಿಯ ವಿದ್ಯಾರ್ಥಿನಿ ನೀರುಪಾಲಾದ ಘಟನೆ ಕಾಲ್ತೋಡು ಗ್ರಾಮದಲ್ಲಿ ಇಂದು ನಡೆದಿದೆ. ಬೊಳಂಬಳ್ಳಿಯ ಮಕ್ಕಿಮನೆ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ಅವರ ಪುತ್ರಿ 7 ವರ್ಷದ ಸನ್ನಿಧಿ ನೀರು ಪಾಲಾಗಿದ್ದು ಹುಡುಕಾಟ ತೀವ್ರಗೊಂಡಿದೆ.
ಸ.ಹಿ.ಪ್ರಾ ಶಾಲೆ ಚಪ್ಪರಿಕೆಯಲ್ಲಿ 2 ನೇ ತರಗತಿಯಲ್ಲಿ ಓದುತ್ತಿರುವ ಸನ್ನಿಧಿ ಸೋಮವಾರ ಸಂಜೆ ಶಾಲೆಬಿಟ್ಟು ಮನೆಗೆ ಬರುವಾಗ ಬೀಜಮಕ್ಕಿ ಎಂಬಲ್ಲಿ ಕಾಲು ಸಂಕವಿದ್ದು ಈ ಕಾಲು ಸಂಕ ದಾಟುವಾಗ ಮಗು ಆಯಾತಪ್ಪಿ ಹಳ್ಳಕ್ಕೆ ಬಿದ್ದಿದ್ದಾಳೆ. ಕೂಡಲೇ ವಿಷಯ ತಿಳಿದು ಸಾರ್ವಜನಿಕರು ಹುಡುಕಾಟ ಆರಂಭಿಸಿದ್ದಾರೆ. ಈ ಹಳ್ಳ ಬೊಳಂಬಳ್ಳಿ ನದಿಗೆ ಸೇರಿದ್ದು ನೀರಿನ ರಭಸ ಜೋರಾಗಿದೆ. ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಇದ್ದು ಶೋಧ ಕಾರ್ಯ ಭರದಿಂದ ಸಾಗಿದೆ
ಸ್ಥಳಕ್ಕೆ ಬೈಂದೂರು ಶಾಸಕರಾದ ಬಿಎಂ ಸುಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಜು ಪೂಜಾರಿ, ತಹಶೀಲ್ದಾರ್ ಕಿರಣ್ ಗೋರಯ್ಯ, ಬೈಂದೂರು ಪಿಎಸ್ಐ ಪವನ್ ನಾಯಕ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಪ್ಪಣ್ಣ ಶೆಟ್ಟಿ ಮೊದಲಾದವರು ಭೇಟಿ ನೀಡಿದ್ದಾರೆ