ಕುಮಟಾದ ಬಗ್ಗೋಣದಲ್ಲಿ ಘರ್ ಘರ್ ಕೊಂಕಣಿ ಸಮಾರಂಭ – ಕಾರ್ಯಕ್ರಮ ಉದ್ಘಾಟಿಸಿದ ಕಾಸರಗೋಡು ಚಿನ್ನಾ



ಕುಮಟಾದ ಉದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ಅವರ ಬಗ್ಗೋಣದ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದ್ದ ಘರ್ ಘರ್ ಕೊಂಕಣಿ ಕಾರ್ಯಕ್ರಮವನ್ನು ಖ್ಯಾತ ಚಲನಚಿತ್ರ ನಟ ನಿರ್ದೇಶಕ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಕಾಸರಗೋಡು ಚಿನ್ನಾ ಉದ್ಘಾಟಿಸಿದ್ರು..

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಸರಕೋಡ ಚಿನ್ನಾ, ಮೂರು ಧರ್ಮದ 42 ಜನಾಂಗದವರು ಮಾತಾಡುವ ವಿಶ್ವದ ಏಕೈಕ ಭಾಷೆ ಕೊಂಕಣಿ. ಇಷ್ಟು ವ್ಯಾಪ್ತಿ ಹೊಂದಿರುವ ಸುಂದರ ಭಾಷೆಯನ್ನು ಉಳಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಕೊಂಕಣಿ ಅಕಾಡೆಮಿಗೆ ಬಂದಿರುವ ಹಣವನ್ನು ಬಳಸಿ ಪ್ರತಿಯೊಂದೂ ಸಮಾಜವನ್ನು ಮುಖ್ಯವಾಹಿನಿಗೆ ತರುವ ಕಾರ್ಯವನ್ನು ಮಾಡಿದ್ದೇನೆ. ನನಗೆ ಹಿಂದೆ ಸಿಕ್ಕಿದ್ದ ಅವಕಾಶದಲ್ಲಿ ಕೊಂಕಣಿಗರೆಲ್ಲರನ್ನೂ ಒಂದೆಡೆ ಸೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದ್ರು..

ಅಧ್ಯಕ್ಷತೆ ವಹಿಸಿದ್ದ ಸುಬ್ರಾಯ ವಾಳ್ಕೆ ಮಾತನಾಡಿ ನನ್ನ ಕುಟುಂಬವೇ ನನಗೆ ಪ್ರೇರಣೆ, ನಾನು ಹೇಳಿದ ಮಾತನ್ನು ಚಾಚೂ ತಪ್ಪದೇ ಮಾಡುವ ನನ್ನ ಕುಟುಂಬವೇ ನನ್ನ ಶಕ್ತಿ ಎನ್ನುತ್ತಾ, ಕೊಂಕಣಿ ಭಾಷೆಯ ಉಳಿವಿಗೆ ನಮ್ಮ ಕೊಡುಗೆಗಳೂ ಸಲ್ಲಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರಿಗೂ ಪ್ರೀತಿಯ ವಂದನೆಗಳು ಎಂದು ಹೇಳಿದ್ರು..
ಬಳಿಕ ಮಾತನಾಡಿದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೀತಿ ಭಂಡಾರ್ಕರ್, ಕಾಸರಗೋಡು ಚಿನ್ನಾ ಕೊಂಕಣಿ ಭಾಷೆಗಾಗಿ ತಮ್ಮ ಆತ್ಮ ಸಮರ್ಪಣೆ ಮಾಡಿಕೊಂಡಿದ್ದಾರೆ ಎಂದರು.

ಶಿಕ್ಷಕಿ ಜಯಾ ಶಾನಭಾಗ ಶಿಶುಗೀತೆ ಹಾಡಿ, ಸುಧಾ ಗೌಡ ಹಾಸ್ಯ ಗೀತೆ ಹಾಡಿ ರಂಜಿಸಿದರು, ಪುರಸಭಾ ಸದಸ್ಯೆ ಪಲ್ಲವಿ ಮಡಿವಾಳ, ನಿವೃತ್ತ ಪ್ರಾಧ್ಯಾಪಕಿ ಬೇಬಿ ಪಡಿಯಾರ, ಶಕುಂತಲಾ ಕಿಣಿ, ಸಾಮಾಜಿಕ ಕಾರ್ಯಕರ್ತ ವಿನೋದ ಪ್ರಭು, ರಮೇಶ ಪ್ರಭು, ಜೈವಿಠಲ್ ಕುಬಾಲ್, ಸೋನಾ ಗಣೇಶ ನಾಯಕ ಇತರರು ಅನಿಸಿಕೆ ಹಂಚಿಕೊಂಡರು.

ಈ ವೇಳೆ ಕಾರ್ಯಕ್ರಮದಲ್ಲಿ, ಸಂಯೋಜಕ ಚಿದಾನಂದ ಭಂಡಾರಿ, ಗೌರೀಶ ಭಂಡಾರಿ, ಶೈಲಾ ಗುನಗಿ ಉಪಸ್ಥಿತರಿದ್ದರು.