ಭಕ್ತಿಯಿದ್ದಲ್ಲಿ ಭಗವಂತ ಇರುತ್ತಾನೆ : ಡಾ.ಮುರಗರಾಜೇಂದ್ರ ಮಹಾಸ್ವಾಮೀಜಿ

ದಾಂಡೇಲಿ : ಹುಟ್ಟು ಸಾವು ಭಗವಂತನ ಕೈಯಲ್ಲಿದೆ. ಆದರೆ ಈ ಹುಟ್ಟು ಸಾವಿನ ನಡುವಿನ ಬದುಕಿನಲ್ಲಿ ಮಾನವೀಯತೆಯನ್ನು ಮೈಗೂಡಿಸಿಕೊಂಡು ಸಮಾಜಮುಖಿಯಾಗಿ ಬಾಳು ನಡೆಸಿದಾಗ ಮಾತ್ರ ಇಹಲೋಕ ತ್ಯಜಿಸಿದ ಮೇಲು ನಮ್ಮ ಹೆಸರು ಅಮರವಾಗಿರಲು ಸಾಧ್ಯ ಎಂದು ಮುಗಳಖೋಡದ ಶ್ರೀ ಷಡಕ್ಷರಿ ಶಿವಯೋಗಿ ಡಾ.ಮುರಗರಾಜೇಂದ್ರ ಮಹಾಸ್ವಾಮಿಗಳು ನುಡಿದರು.

ಅವರು ಭಾನುವಾರ ನಗರದ ಸಮೀಪದಲ್ಲಿರುವ ಶ್ರೇಯಸ ಪೇಪರ್ ಮಿಲ್ ಹತ್ತಿರದ ಮುಗಳಖೋಡ ಯಲ್ಲಾರಲಿಂಗೇಶ್ವರ ಶಾಖಾ ಮಠದ ಉದ್ಘಾಟನೆಯನ್ನು ನೆರವೇರಿಸಿ ಭಕ್ತಾದಿಗಳಿಗೆ ಆಶೀರ್ವಚನ ನೀಡುತ್ತಾ ಮಾತನಾಡಿದರು. ಭಕ್ತಿ ಇದ್ದಲ್ಲಿ ಭಗವಂತ ಇರುತ್ತಾನೆ. ಭಕ್ತಿಯಿಂದ ಭಗವಂತನನ್ನು ಆರಾಧಿಸಿದಾಗ ಭಗವಂತನ ಅನುಗ್ರಹ ದೊರೆಯಲು ಸಾಧ್ಯ. ದಾಂಡೇಲಿ ಜನರ ಭಕ್ತಿಯಿಂದ ಯಲ್ಲಾಲಿಂಗೇಶ್ವರರ ಕೃಪೆಯಿಂದ ಈ ಶಾಖೆ ಆರಂಭವಾಗಿದೆ. ಇನ್ನು ಮುಂದೆ ಪ್ರತಿ ವರ್ಷ ಈ ಶಾಖಾಮಠದಲ್ಲಿ ಜಾತ್ರೆ ಏರ್ಪಡಿಸಲಾಗುವದು ಎಂದರು.

ಬಿಜಾಪುರದ ಅಹೇರಿ ಮಠದ ಶ್ರೀ. ಸಂಜಯ ಮಹಾರಾಜ ಸ್ವಾಮಿಜಿ ಹಾಗು ಗೋವಾ ಮಠದ, ಮುಗಳಖೋಡ ಮಠದ ಶ್ರೀಗಳು ಹಾಗೂ ಇನ್ನಿತರ ಗಣ್ಯರು ಮತ್ತು ದಾಂಡೇಲಿ ಶಾಖಾ ಮಠದ ಉಸ್ತುವಾರಿ ಭಕ್ತ ಅಮೋಗಿ ಮದರಿ ಉಪಸ್ಥಿತರಿದ್ದರು.

ಕಾರ್ಯಕ್ರಮzಲ್ಲಿ ಗಾಂಧಿನಗರದ ಮಂಜುನಾಥ ಪಾಟೀಲ್ ದಂಪತಿಗಳು ಡಾ.ಮುರಗರಾಜೇಂದ್ರ ಮಾಹಾಸ್ವಾಮಿಗಳ ಪಾದಪೂಜೆ ಮಾಡಿದರು. ಪೂಜ್ಯ ಸ್ವಾಮೀಜಿಯವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯ್ತು. ಶಾಖಾ ಮಠದ ಉದ್ಘಾಟನಾ ಸಮಿತಿಯ ಪ್ರಮುಖ ಶ್ರೀಮಂತ ಮದರಿ ಸ್ವಾಗತಿಸಿದರು. ಹನುಮಂತ ಕುಂಬಾರ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಮದನ ಹಲವಾಯಿ, ಬಸವರಾಜ ಶಾಬಾದಿ, ಹರಳಯ್ಯ ಲೋಗಾವಿ, ಬಸವರಾಜ ಮಾಶಾಳ, ಶಿವಲಿಂಗಪ್ಪ ಶಾಬಾದಿ, ಶ್ಯಾಮ ಶಾಖಾಪುರೆ ಹಾಗೂ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ವಾಮೀಜಿಯವರನ್ನು ಸನ್ಮಾನಿಸಲಾಯಿತು. ಗೊವಾ, ಕಾರವಾರ, ಧಾರವಾಡ, ದಾಂಡೇಲಿ, ಹಳಿಯಾಳ, ಜೋಯಿಡಾ ತಾಲೂಕಿನಿಂದಲೂ ಭಕ್ತರು ಆಗಮಿಸಿ ಸ್ವಾಮೀಜಿಯವರ ದರ್ಶನ ಪಡೆದರು. ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.