ದಾಂಡೇಲಿಯ ಶಾಖಾ ಮಠದ ಶಾಶ್ವತ ಅಭಿವೃದ್ಧಿಗೆ ಕ್ರಮ : ಗೋಕರ್ಣ ಪರ್ತಗಾಳಿ ಮಠದ ಪೂಜ್ಯ ಶ್ರೀ.ವಿದ್ಯಾಧೀಶತೀರ್ಥ ಶ್ರೀಪಾದ ಸ್ವಾಮೀಜಿ

ದಾಂಡೇಲಿ : ದಾಂಡೇಲಿಯ ಶಾಖಾ ಮಠವನ್ನು ಅಭಿವೃದ್ಧಿಗೊಳಿಸುವ ಪೂಜ್ಯ ಶ್ರೀ.ವಿದ್ಯಾಧಿರಾಜ ಗುರುಗಳ ಮಹತ್ವದ ಸಂಕಲ್ಪವನ್ನು ಈಡೇರಿಸುವ ನಿಟ್ಟಿನಲ್ಲಿ ವಿಶೇಷ ಚಿಂತನೆಯನ್ನು‌ ನಡೆಸಲಾಗಿದೆ. ದಾಂಡೇಲಿಯ ಶಾಖಾ ಮಠದ ಶಾಶ್ವತ ಅಭಿವೃದ್ಧಿಗೆ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದೆಂದು ಶ್ರೀ.ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮ ಪೂಜ್ಯ ಗುರುವರ್ಯ ಶ್ರೀ. ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಹೇಳಿದರು.

ಅವರು ಗುರುವಾರ ಸಂಜೆ ದಾಂಡೇಲಿ ನಗರಕ್ಕೆ ಆಗಮಿಸಿ, ಆನಂತರ ನಗರದ ಕುಳಗಿ ರಸ್ತೆಯಲ್ಲಿರುವ ವಿದ್ಯಾಧಿರಾಜ ಸಭಾಭವನದಲ್ಲಿ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ನಾನು ಪಟ್ಟಾಭೀಷಿಕ್ತನಾಗಿ ಮೊದಲ ಬಾರಿಗೆ ದಾಂಡೇಲಿಗೆ ಬಂದಿದ್ದೇನೆ.‌ ಇಲ್ಲಿಯ ಪರಿಸರ ಹೇಗೆ ಹಸಿರಾಗಿದೆಯೊ, ಅದೇ ರೀತಿ ಸಮಾಜ ಬಾಂಧವರ ಮನಸ್ಸು ಶುಭ್ರ ಸ್ವಚ್ಚದಿಂದಿದೆ ಎನ್ನುವುದನ್ನು ಸಮಾಜ ಬಾಂಧವರು ಅಭೂತವಾಗಿ ಸ್ವಾಗತಿಸಿದ ರೀತಿ ಮತ್ತು ಸಮಾಜ ಬಾಂಧವರಲ್ಲಿರುವ ಪರಸ್ಪರ ಸೌಹಾರ್ದತೆ ಹಾಗೂ ಸಮನ್ವಯತೆಯ‌ ಮೂಲಕ ಸಾದರಗೊಂಡಿದೆ. ಈ ಶಾಖಾ ಮಠವನ್ನು ಅಭಿವೃದ್ಧಿಗೊಳಿಸಿ ಇಲ್ಲೆ ಚಾತುರ್ಮಾಸ ಕಾರ್ಯಕ್ರಮವನ್ನು ಆಯೋಜಿಸಬೇಕೆಂಬ ಉತ್ಕಟ ಬಯಕೆಯು ಇದೆ ಎಂದರು. ನಾನು ಎನ್ನುವುದನ್ನು‌ ಬಿಟ್ಟು‌ ನಾವು ಎನ್ನುವುದನ್ನು‌ ಮೈಗೂಡಿಸಿಕೊಂಡು ಸಮಾಜ ಬಾಂಧವರನ್ನು ಒಗ್ಗೂಡಿಸಿ, ಸದೃಢ ಸಮಾಜವನ್ನು ಕಟ್ಟಬೇಕು. ನಾವು‌ ಮಾಡುವ ಪೂಜೆ, ಪುರಸ್ಕಾರ, ಭಕ್ತಿ ಶ್ರದ್ಧಾಮಯ‌ವಾಗಿರಬೇಕೆಂದು ಹೇಳಿ ಶ್ರೀ.ಲಕ್ಷ್ಮೀ‌ವೆಂಕಟರಮಣ ದೇವರ ಸಾನಿಧ್ಯದ ಬಗ್ಗೆ ಧಾರ್ಮಿಕ ಜಾಗೃತಿಯನ್ನು‌‌ ಮೂಡಿಸಿದರು.

ಆರಂಭದಲ್ಲಿ ಶ್ರೀ ಲಕ್ಷ್ಮಿ ವೆಂಕಟರಮಣ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಲಾಯ್ತು. ಆನಂತರ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ರಾಧಾಕೃಷ್ಣ ಹೆಗಡೆ ಮತ್ತು ಶ್ರೀ.ಲಕ್ಷ್ಮೀ‌ವೆಂಕಟರಮಣ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಜನಾರ್ಧನ ಪ್ರಭು ಅವರು ಪೂಜ್ಯರ ಪಾದಪೂಜೆಯನ್ನು ನೆರವೇರಿಸಿದರು.

ರಾಧಾಕೃಷ್ಣ ಹೆಗಡೆಯವರು ಸ್ವಾಗತಿಸಿದರು. ಸುರೇಶ್ ಕಾಮತ್‌ ಮತ್ತು ಶ್ರೀನಿವಾಸ ಪ್ರಭು ಕಾರ್ಯಕ್ರಮವನ್ನು‌ ನಿರೂಪಿಸಿ, ವಂದಿಸಿದರು.