ನವದೆಹಲಿ: ಇಂದು ನಡೆದ ಚುನಾವಣೆಯಲ್ಲಿ ಭಾರತದ 14ನೇ ಉಪರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಆಯ್ಕೆಯಾಗಿದ್ದಾರೆ. ಪ್ರತಿಪಕ್ಷಗಳ ಅಭ್ಯರ್ಥಿಯಾಗಿದ್ದ ಮಾರ್ಗರೇಟ್ ಆಳ್ವ ಪರಾಭವಗೊಂಡಿದ್ದಾರೆ.
ಜಗದೀಪ್ ಧನಕರ್ 528 ಮತಗಳನ್ನು ಪಡೆದರೆ, ವಿರೋಧ ಪಕ್ಷದ ಅಭ್ಯರ್ಥಿ ಮಾರ್ಗರೆಟ್ ಆಳ್ವ 182 ಮತಗಳನ್ನು ಪಡೆದರು. ಮತದಾನದಲ್ಲಿ 15 ಮತಗಳು ಅಸಿಂಧುಗೊಂಡಿವೆ.
ರಾಜಸ್ಥಾನದ ಕಿತನಾ ಎಂಬ ಗ್ರಾಮದಲ್ಲಿ ಜನಿಸಿದ್ದ ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದವರು. ಜುಲೈ 18ರಂದು ಉಪರಾಷ್ಟ್ರಪತಿ ಚುನಾವಣೆಗೆ ಜಗದೀಪ್ ದಂಖರ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದರು. ಪ್ರಸ್ತುತ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಅವಧಿ ಆಗಸ್ಟ್ 10 ರಂದು ಕೊನೆಗೊಳ್ಳಲಿದ್ದು, ನೂತನ ರಾಷ್ಟ್ರಪತಿ ಆಗಸ್ಟ್ 11 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.