ಕೆನರಾ ಲೋಕಸಭಾ ಕ್ಷೇತ್ರಕ್ಕೆ ದೇಶಪಾಂಡೆ ಅಭ್ಯರ್ಥಿ?

ದಾಂಡೇಲಿ : ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಪಕ್ಷಗಳ ರಾಜಕೀಯ ಚಟುವಟಿಕೆಗಳು ಗರಿಗೆದರಿಕೊಂಡಿವೆ.

ಹಾಲಿ ಸಂಸದರಾದ ಬಿಜೆಪಿಯ ಅನಂತ ಕುಮಾರ್ ಹೆಗಡೆಯವರು ಈ ಬಾರಿ ಸ್ಪರ್ಧೆಗಿಳಿಯುವ‌ ಖಚಿತತೆಯ ಬಗ್ಗೆ ಇದ್ದ ಅನುಮಾನಗಳು ಬಹುತೇಕ ದೂರವಾಗುವ ಹಂತದಲ್ಲಿದೆ ಎಂದೆ ಹೇಳಲಾಗುತ್ತಿದೆ. ಅನಂತ ಕುಮಾರ್ ಹೆಗಡೆಯವರು ಸ್ಪರ್ಧೆಗಿಳಿಯುವ ಭರವಸೆಯನ್ನು ಅವರ ಅಭಿಮಾನಿಗಳು ಹೊಂದಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕಿದ್ದು, ಈ ಬಾರಿ ಹೆಚ್ಚಿನ ಸ್ಥಾನಗಳನ್ನು ವಶಕ್ಕೆ ಪಡೆದುಕೊಳ್ಳುವ ನಿಟ್ಟಿನಲ್ಲಿ ತನ್ನದೇ ಆದ ಕಾರ್ಯತಂತ್ರಗಳನ್ನು ಹೆಣೆಯುತ್ತಿದೆ. ಈ ನಡುವೆ ಕೆನರಾ ಲೋಕಸಭಾ ಕ್ಷೇತ್ರಕ್ಕೆ ರಾಜ್ಯದ ಹಿರಿಯ ಕಾಂಗ್ರೆಸ್ ಮುತ್ಸದ್ದಿ ನಾಯಕ, ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾಗಿರುವ ಆರ್.ವಿ.ದೇಶಪಾಂಡೆಯವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯ ಅವರು ಕೂಡ ದೇಶಪಾಂಡೆಯವರೇ ಸ್ಪರ್ಧಿಸಬೇಕೆಂಬ ಮನದ ಮಾತನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈವರೆಗೆ ಆರ್.ವಿ.ದೇಶಪಾಂಡೆ ಅವರು ಮಾತ್ರ ಸ್ಪರ್ಧೆಯ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ದೇಶಪಾಂಡೆ ಅವರು ಸ್ಪರ್ಧೆಗೆ ಒಪ್ಪದೇ ಇದ್ದ ಸಂದರ್ಭದಲ್ಲಿ ದೇಶಪಾಂಡೆ ಅವರ ನೇತೃತ್ವದಲ್ಲಿಯೇ ಕಾಂಗ್ರೆಸ್ ಕೆನರಾ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಎದುರಿಸಲಿದ್ದು, ಪುತ್ರ ಪ್ರಶಾಂತ್ ದೇಶಪಾಂಡೆ ಅವರಿಗೆ ಕಾಂಗ್ರೆಸ್ ಟಿಕೇಟ್ ನೀಡಿ, ಪಕ್ಷದ ಗೆಲುವಿನ ಜವಾಬ್ದಾರಿಯ ಹೊಣೆಯನ್ನು ಆರ್.ವಿ.ದೇಶಪಾಂಡೆ ಅವರಿಗೆ ಕಾಂಗ್ರೆಸ್ ನೀಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.