ಕಿಂಗ್ ಕೊಹ್ಲಿಯ ಮೊದಲ ಶತಕಕ್ಕೆ 14 ವರ್ಷ..!

ಅದು ಡಿಸೆಂಬರ್ 24, 2009…ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿತ್ತು. ಉಭಯ ತಂಡಗಳೂ ಬಲಿಷ್ಠ ಪಡೆಯನ್ನು ಹೊಂದಿದ್ದರಿಂದ ರೋಚಕ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಕುಮಾರ್ ಸಂಗಾಕ್ಕರ ಮರು ಯೋಚಿಸದೇ ಬ್ಯಾಟಿಂಗ್ ಆಯ್ದುಕೊಂಡರು.

ಇನಿಂಗ್ಸ್ ಆರಂಭಿಸಿದ ಲಂಕಾ ತಂಡಕ್ಕೆ ಎಡಗೈ ಆರಂಭಿಕ ಆಟಗಾರ ಉಪುಲ್ ತರಂಗ ಸ್ಪೋಟಕ ಆರಂಭ ಒದಗಿಸಿದರು. ಟೀಮ್ ಇಂಡಿಯಾ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ ತರಂಗ 118 ರನ್ ಬಾರಿಸಿ ಝಹೀರ್ ಖಾನ್​ಗೆ ವಿಕೆಟ್ ಒಪ್ಪಿಸಿದರು.

ಆ ಬಳಿಕ ಬಂದ ಕುಮಾರ್ ಸಂಗಾಕ್ಕರ 60 ರನ್​ಗಳ ಕೊಡುಗೆ ನೀಡಿದರೆ, ಕೊನೆಯ ಓವರ್​ಗಳ ವೇಳೆ ಅಬ್ಬರಿಸಿದ ತಿಸಾರ ಪೆರೇರಾ ಕೇವಲ 14 ಎಸೆತಗಳಲ್ಲಿ 31 ರನ್ ಚಚ್ಚಿದರು. ಅದರಂತೆ ಶ್ರೀಲಂಕಾ ತಂಡವು 50 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 315 ರನ್​ ಕಲೆಹಾಕಿತು.

316 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಟೀಮ್ ಇಂಡಿಯಾಗೆ ಸುರಂಗ ಲಕ್ಮಲ್ ಬ್ಯಾಕ್ ಟು ಬ್ಯಾಕ್ ಆಘಾತ ನೀಡಿದರು. ಆರಂಭಿಕರಾದ ವೀರೇಂದ್ರ ಸೆಹ್ವಾಗ್ (10) ಹಾಗೂ ಸಚಿನ್ ತೆಂಡೂಲ್ಕರ್ (8) ವಿಕೆಟ್ ಪಡೆದು ಲಕ್ಮಲ್ ಶ್ರೀಲಂಕಾ ತಂಡಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು.ಆರಂಭದಲ್ಲೇ ಇಬ್ಬರು ದಿಗ್ಗಜರ ವಿಕೆಟ್ ಸಿಗುತ್ತಿದ್ದಂತೆ ಶ್ರೀಲಂಕಾ ಕೂಡ ಪಂದ್ಯ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರೆ…

ಆಗಷ್ಟೇ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದ ಚಿಗುರು ಮೀಸೆಯ ಯುವಕನೊಬ್ಬ ಗೌತಮ್ ಗಂಭೀರ್ ಜೊತೆಗೂಡಿ ಇಡೀ ತಂಡದ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡಿದ್ದ. ಆರಂಭಿಕ ಯಶಸ್ಸಿನೊಂದಿಗೆ ಹುಮ್ಮಸ್ಸಿನಲ್ಲಿದ್ದ ಲಂಕಾ ಬೌಲರ್​ಗಳನ್ನು ದಿಟ್ಟವಾಗಿಯೇ ಎದುರಿಸಿದ.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಆತನ ಆತ್ಮವಿಶ್ವಾಸ ನೋಡಿ ಶ್ರೀಲಂಕಾ ಬೌಲರ್​ಗಳೇ ಹೈರಾಣರಾದರು. ಪರಿಣಾಮ 15 ಓವರ್​ಗಳ ವೇಳೆಗೆ ಟೀಮ್ ಇಂಡಿಯಾ ಸ್ಕೋರ್ 100ರ ಗಡಿ ತಲುಪಿತು. ಅಲ್ಲಿಗೆ ಶ್ರೀಲಂಕಾ ಬೌಲರ್​ಗಳಿಗೆ ಇದು 21 ವರ್ಷದ ಹೊಸ ಸಿಡಿಲಮರಿ ಎಂಬುದು ಖಾತ್ರಿಯಾಗಿತ್ತು.

ಹೌದು, ಕೇವಲ 23 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಟೀಮ್ ಇಂಡಿಯಾ ಪರ ಆತ್ಮ ವಿಶ್ವಾಸದಿಂದಲೇ ಅಬ್ಬರಿಸಿದ ಆ ಆಟಗಾರ ವಿರಾಟ್ ಕೊಹ್ಲಿ. ಅಂದು ಗೌತಮ್ ಗಂಭೀರ್ ಜೊತೆಗೂಡಿ ಅದ್ಭುತ ಇನಿಂಗ್ಸ್​ ಕಟ್ಟಿದ ಕೊಹ್ಲಿ ತನ್ನ ಎಂಟ್ರಿಯನ್ನು ವಿಶ್ವಕ್ಕೆ ಸಾರಿದ್ದರು.

ಮೂರನೇ ವಿಕೆಟ್​ಗೆ ಬರೋಬ್ಬರಿ 224 ರನ್​ಗಳ ಜೊತೆಯಾಟವಾಡುವ ಮೂಲಕ ಟೀಮ್ ಇಂಡಿಯಾವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅಷ್ಟೇ ಅಲ್ಲದೆ 111 ಎಸೆತಗಳಲ್ಲಿ ಶತಕ ಪೂರೈಸಿ 21 ವರ್ಷದ ವಿರಾಟ್ ಕೊಹ್ಲಿ ಬ್ಯಾಟ್ ಮೇಲೆಕ್ಕೆತ್ತಿದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕಿಂಗ್ ಕೊಹ್ಲಿಯ ಬ್ಯಾಟ್​ನಿಂದ ಮೂಡಿ ಬಂದ ಮೊದಲ ಶತಕ.

ಭರ್ಜರಿ ಸೆಂಚುರಿ ಬೆನ್ನಲ್ಲೇ ವಿರಾಟ ರೂಪ ತೋರಿಸಲು ಮುಂದಾದ ವಿರಾಟ್ ಕೊಹ್ಲಿ 114 ಎಸೆತಗಳಲ್ಲಿ 1 ಭರ್ಜರಿ ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ 107 ರನ್ ಬಾರಿಸಿ ಔಟಾದರು. ಇನ್ನು ಈ ಪಂದ್ಯದಲ್ಲಿ ಅಜೇಯ 150 ರನ್​ ಬಾರಿಸುವ ಮೂಲಕ ಗೌತಮ್ ಗಂಭೀರ್ 48.1 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಟೀಮ್ ಇಂಡಿಯಾವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಭಾರತ ತಂಡ ಭರ್ಜರಿ ಜಯ ಸಾಧಿಸಿತು.

ನಿರೀಕ್ಷೆಯಂತೆ ಪಂದ್ಯ ಶ್ರೇಷ್ಠ ಪ್ರಶಸ್ತಿಯು 150 ರನ್​ ಬಾರಿಸಿದ್ದ ಗೌತಮ್ ಗಂಭೀರ್​ಗೆ ಒಲಿಯಿತು. ಆದರೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕಿಂಗ್ ಕೊಹ್ಲಿ ನೀಡುವ ಮೂಲಕ ಗೌತಮ್ ಗಂಭೀರ್ ಎಲ್ಲರ ಹೃದಯ ಗೆದ್ದಿದ್ದರು.