ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೊಸ ವಿಶ್ವ ದಾಖಲೆ ಬರೆಯುವ ಹೊಸ್ತಿಲಲ್ಲಿದ್ದಾರೆ. ಅದು ಕೂಡ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರ ವಿಶ್ವ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.
ಅಂದರೆ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರ ಎಂಬ ವಿಶ್ವ ದಾಖಲೆ ಶ್ರೀಲಂಕಾದ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. ಲಂಕಾ ಲೆಜೆಂಡ್ 61 ಸರಣಿಗಳನ್ನು ಆಡಿದ್ದು, ಈ ವೇಳೆ 11 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.
ಮತ್ತೊಂದೆಡೆ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದುವರೆಗೆ 39 ಟೆಸ್ಟ್ ಸರಣಿಗಳನ್ನಾಡಿದ್ದಾರೆ. ಈ ವೇಳೆ 10 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಇದೀಗ ರವಿಚಂದ್ರನ್ ಅಶ್ವಿನ್ ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲು ಸಜ್ಜಾಗಿದ್ದಾರೆ. ಡಿಸೆಂಬರ್ 26 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಭಾರತ 2 ಪಂದ್ಯಗಳನ್ನಾಡಲಿದೆ. ಈ ವೇಳೆ ಅದ್ಭುತ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ ರವಿಚಂದ್ರನ್ ಅಶ್ವಿನ್.
ಅದರಂತೆ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಪ್ಲೇಯರ್ ಆಫ್ ದಿ ಸಿರೀಸ್ ಪ್ರಶಸ್ತಿ ಪಡೆದರೆ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಮುತ್ಯಯ್ಯ ಮುರಳೀಧರನ್ ಅವರ ವಿಶ್ವ ದಾಖಲೆಯನ್ನು ಅಶ್ವಿನ್ ಸರಿಗಟ್ಟಲಿದ್ದಾರೆ. ಅಷ್ಟೇ ಅಲ್ಲದೆ ಅತೀ ಕಡಿಮೆ ಸರಣಿಗಳಲ್ಲಿ ಈ ಸಾಧನೆ ಮಾಡಿದ ವಿಶ್ವ ದಾಖಲೆ ರವಿಚಂದ್ರನ್ ಅಶ್ವಿನ್ ಪಾಲಾಗಲಿದೆ.
ಸೌತ್ ಆಫ್ರಿಕಾ ಸರಣಿಗೆ ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ.