ಬೆಂಗಳೂರು, ಡಿಸೆಂಬರ್ 21: ಕೊರೊನಾ ಒಮಿಕ್ರಾನ್ ರೂಪಾಂತರಿ ತಳಿ JN.1 ಭೀತಿ ಶುರುವಾಗಿದೆ. ಆರೋಗ್ಯ ಇಲಾಖೆ ಸಲಹೆ ಮೇರೆಗೆ ಶಾಲಾ ಮಕ್ಕಳಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಆರೋಗ್ಯ ಇಲಾಖೆ ಮಾರ್ಗಸೂಚಿ ಪರಿಗಣಿಸುತ್ತೇವೆ. ಏನೆಲ್ಲಾ ಕ್ರಮ ವಹಿಸಬೇಕು ಅಂತಾ ನಿರ್ಧಾರ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಕೊವಿಡ್ ಏರಿಕೆ ಅನಿಸುತ್ತಿದೆ. ಈಗ ಸಿಎಂ ಸಿದ್ದರಾಮಯ್ಯ ಜೊತೆ ಕೂಡ ಈ ಬಗ್ಗೆ ಚರ್ಚೆಯಾಗಿದೆ. ಹೀಗಾಗಿ ಮಾಸ್ಕ್ ಟೆಸ್ಟಿಂಗ್ ಎಲ್ಲದರ ಬಗ್ಗೆ ನಿರ್ಧಾರ ಮಾಡುತ್ತಿದ್ದಾರೆ ಎಂದಿದ್ದಾರೆ.
ಮಕ್ಕಳು ಮಾಸ್ಕ್ ಹಾಕಿಕೊಂಡರೆ ಒಳ್ಳೆಯದು ಅಲ್ವಾ: ಸಿಎಂ ಸಿದ್ದರಾಮಯ್ಯ
ಶಾಲಾ ಮಕ್ಕಳಿಗೆ ಮಾಸ್ಕ್ ಕಡ್ಡಾಯಗೊಳಿಸುವ ವಿಚಾರವಾಗಿ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಕ್ಯಾಬಿನೆಟ್ ಸಬ್ ಕಮಿಟಿ ರಚಿಸಿ ಅಲ್ಲಿ ತೀರ್ಮಾನ ಮಾಡಲಾಗುತ್ತೆ. ಮಕ್ಕಳು ಮಾಸ್ಕ್ ಹಾಕಿಕೊಂಡರೆ ಒಳ್ಳೆಯದು ಅಲ್ವಾ ಎಂದು ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ RT-PCR ದರ ನಿಗದಿ ಮಾಡುವ ವಿಚಾರವಾಗಿ ಮಾತನಾಡಿದ್ದು, ಕ್ಯಾಬಿನೆಟ್ ಉಪಸಮಿತಿಯಲ್ಲಿ ಎಲ್ಲವನ್ನೂ ಚರ್ಚೆ ಮಾಡುತ್ತೇವೆ. ಎಲ್ಲೆಡೆ ಟೆಸ್ಟ್ ಮಾಡಿಸಲು ಮುಂದಾದರೆ ಮತ್ತೆ ಜಾಸ್ತಿ ಆಗಬಹುದು ಎಂದಿದ್ದಾರೆ.