ಕೊಪ್ಪಳ: ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ; ಇದ್ದೊಬ್ಬ ಮಗನನ್ನು ಕಳೆದುಕೊಂಡ ಕಂಗಾಲಾದ ಕುಟುಂಬ

ಕೊಪ್ಪಳ, ಡಿ.19: ನಗರದ ಹೊರವಲಯದ ಮಳೆ ಮಹದೇಶ್ವರ ಬೆಟ್ಟದಲ್ಲಿ ಯುವಕನ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಕೊಪ್ಪಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.‌ ನಂತರ ಮೃತ ಯುವಕನ ಹೆಸರು ಬಸವರಾಜ್ ಹೊಸಮನಿ ಎಂದು ಗೊತ್ತಾಗಿದೆ. ಇಪ್ಪತ್ತೆರಡು ವರ್ಷದ ಬಸವರಾಜ್, ಕೊಪ್ಪಳ ತಾಲೂಕಿನ ಮೋರನಾಳ್ ಗ್ರಾಮದ ನಿವಾಸಿ. ಗ್ರಾಮದಲ್ಲಿಯೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ. ಕಳೆದ ಶುಕ್ರವಾರ(ಡಿ.15) ಸ್ನೇಹಿತನ ಜೊತೆ ಕುರಿ ಸಂತೆಗೆ ಹೋಗಿ ಬರುತ್ತೇನೆಂದು ಬೈಕ್ ಮೇಲೆ ಹೋಗಿದ್ದ ಬಸವರಾಜ್, ಮರಳಿ ಮನೆಗೆ ಬಾರದೆ ಇದ್ದಾಗ ಕುಟುಂಬ ಕಂಗಾಲಾಗಿತ್ತು. ಅನೇಕ ಕಡೆ ಕುಟುಂಬದವರು ಹುಡುಕಾಟ ನಡೆಸಿದ್ದರು. ಆದ್ರೆ, ಬಸವರಾಜ್ ಬದುಕಿಲ್ಲ, ಬಾರದ ಲೋಕಕ್ಕೆ ಹೋಗಿದ್ದಾನೆ ಎಂದು ನಿನ್ನೆ(ಡಿ.18) ಸಂಜೆ ಕುಟುಂಬದವರಿಗೆ ಗೊತ್ತಾಗಿದೆ. ಆದ್ರೆ, ತಮ್ಮ ಮಗನದ್ದು ಸಹಜ ಸಾವಲ್ಲ,  ಬದಲಾಗಿ ಕೊಲೆ ಅಂತ ಕುಟುಂಬದವರು ಆರೋಪಿಸಿದ್ದಾರೆ.

ಮೃತ ಬಸವರಾಜ್, ಅದೇ ಗ್ರಾಮದ ಮತ್ತೋರ್ವ ಯುವಕ ಬಸಪ್ಪನ ಜೊತೆ ಆತ್ಮೀಯ ಸ್ನೇಹ ಹೊಂದಿದ್ದನಂತೆ. ತನ್ನ ಬಳಿಯಿದ್ದ ಕುರಿಗಳನ್ನು ಮೇಯಿಸಲು ಸ್ನೇಹಿತ ಬಸಪ್ಪಗೆ ನೀಡಿದ್ದನಂತೆ. ಆದರೆ, ಸ್ನೇಹಿತ ಬಸಪ್ಪ ಕುರಿಗಳನ್ನು 42 ಸಾವಿರಕ್ಕೆ ಮಾರಾಟ ಮಾಡಿಕೊಂಡು, ಈ ಪೈಕಿ ಹನ್ನೆರಡು ಸಾವಿರ ನೀಡಿದ್ದನಂತೆ. ಉಳಿದ ಹಣವನ್ನು ನೀಡದೆ ಸ್ನೇಹಿತ ಬಸಪ್ಪ ಸತಾಯಿಸಿದ್ದನಂತೆ. ಹೀಗಾಗಿ ಕಳೆದ ಶುಕ್ರವಾರ ಕುಕನಪಳ್ಳಿಗೆ ಹೋಗೋಣಾ,‌ ಅಲ್ಲಿ ನಿನ್ನ ದುಡ್ಡು ಕೊಡುತ್ತೇನೆ. ನಂತರ ಸಂತೆ ಮಾಡಿಕೊಂಡು ಬರೋಣಾ ಎಂದು ಬಸವರಾಜ್​ನನ್ನು ಸ್ನೇಹಿತ ಕರೆದುಕೊಂಡು ಬಂದಿದ್ದನಂತೆ.

ಆದರೆ, ಬಸಪ್ಪ ಒಬ್ಬನೇ ಮರಳಿ ಮನೆಗೆ ಹೋಗಿದ್ದ. ಹೀಗಾಗಿ ಅನುಮಾನಗೊಂಡ ಕುಟುಂಬದವರು ಕೇಳಿದಾಗ ಆತ ಕೊಪ್ಪಳದಿಂದ ಎಲ್ಲಿ ಹೋಗಿದ್ದಾನೆ ಎಂದು ಗೊತ್ತಿಲ್ಲವೆಂದು ಹೇಳಿದ್ದನಂತೆ. ಹೀಗಾಗಿ ಕಳೆದ ಮೂರು ದಿನಗಳಿಂದ ಹುಡುಕಾಟ ನಡೆಸಿದಾಗ ಬಸವರಾಜ್ ಎಲ್ಲಿದ್ದಾನೆ ಎಂದು ಗೊತ್ತಾಗಿರಲಿಲ್ಲ. ಆದ್ರೆ, ನಿನ್ನೆ ಸಂಜೆ ಬಸವರಾಜ್​ನ ಶವ, ಕೊಳೆತು ವಾಸನೆ ಬಂದಾಗ ಗೊತ್ತಾಗಿದೆ. ಸದ್ಯ ಬಸವರಾಜ್ ಕೊಲೆಗೆ ಸಂಬಂಧಿಸಿದಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಸಪ್ಪ ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆದಿದೆ. ಆದ್ರೆ, ಆರೋಪಿ ಸಿಕ್ಕ ಮೇಲೆ ಕೊಲೆಗೆ ಕಾರಣ ಗೊತ್ತಾಗಲಿದೆ. ಮನೆಗೆ ಆಧಾರವಾಗಿದ್ದ ವ್ಯಕ್ತಿ ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರ್ದೈವದ ಸಂಗತಿಯಾಗಿದೆ.