ಬೆಂಗಳೂರು, ಡಿ.19: ಕೇರಳದಲ್ಲಿ ಕೊರೊನಾ ಹೆಚ್ಚಳವಾಗಿದೆ. ಈ ಮಧ್ಯೆ ಬೆಂಗಳೂರಿನಿಂದ ಅಯ್ಯಪ್ಪನ ದರ್ಶನಕ್ಕಾಗಿ ಭಕ್ತರು ಕೇರಳಕ್ಕೆ ಹೋಗಿದ್ದು, ಪಾಲಿಕೆಗೆ ಟೆನ್ಷನ್ ಆಗಿ ಪರಿಣಮಿಸಿದೆ. ಈ ಕುರಿತು ಮಾತನಾಡಿದ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರೆಡ್ಡಿ ಶಂಕರ್ ಬಾಬು ‘ಅಯ್ಯಪ್ಪ ದರ್ಶನದ ಬಳಿಕ ವಾಪಾಸ್ ಆಗುವ ಭಕ್ತಾದಿಗಳಿಗೆ ಸ್ಕ್ರೀನಿಂಗ್ ಮಾಡಿಸುವ ಬಗ್ಗೆ ಪಾಲಿಕೆಯಲ್ಲಿ ಅಧಿಕಾರಿಗಳ ಚರ್ಚೆ ನಡೆಯುತ್ತಿದೆ. ಆದರೆ, ಕೇಂದ್ರ ಆರೋಗ್ಯ ಇಲಾಖೆಯ ಸಭೆ ಬಳಿಕ ಬರುವ ಮಾರ್ಗಸೂಚಿಗೆ ಬಿಬಿಎಂಪಿ ಕಾಯುತ್ತಿದೆ ಎಂದರು.
ಕೇಂದ್ರ ಸರ್ಕಾರದ ನಿರ್ಧಾರವೂ ಬಂದ ಬಳಿಕ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಸದ್ಯಕ್ಕೆ ಬೆಂಗಳೂರಲ್ಲಿ ಕೋವಿಡ್ ಪ್ಯಾನಿಕ್ ಪರಿಸ್ಥಿತಿ ಇಲ್ಲ. ಜನ ಹೆದರುವುದು ಬೇಡ, ಕೇಸ್ ಕಡಿಮೆ ಇದೆ. ಆದರೂ ಮುನ್ನೆಚ್ಚರಿಕೆ ಅಗತ್ಯವಿದ್ದು, ರಾಜ್ಯ ಸರ್ಕಾರ ಮತ್ತು ಕೇಂದ್ರದ ಗೈಡ್ ಲೈನ್ಸ್ ಪ್ರಕಾರ ಕ್ರಮಗಳನ್ನ ಕೈಗೊಳ್ಳುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಕೊರೋನಾ ಸೋಂಕು ಹರಡುವ ಭೀತಿ ಹಿನ್ನೆಲೆ ಕೋವಿಡ್ ನಿಯಂತ್ರಣಕ್ಕೆ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಸಲು ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಇದರ ಜೊತೆಗೆ ಕೊವೀಡ್ ತುರ್ತು ಪರಿಸ್ಥಿತಿ ನಿಭಾಯಿಸಲು ಇಲಾಖೆಯು ವ್ಯವಸ್ಥೆ ಮಾಡಿಕೊಂಡಿದೆ. ಅದರಂತೆ ಆರೋಗ್ಯ ಸೌಲಭ್ಯಗಳ ಲಭ್ಯತೆ, ಹಾಸಿಗೆಗಳ ಸಾಮರ್ಥ್ಯ, ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಸೇರಿದಂತೆ ಮಾನವ ಸಂಪನ್ಮೂಲಗಳ ಲಭ್ಯತೆ. ತಾಂತ್ರಿಕ ಮತ್ತು ಅಕ್ಸಿಜನ್ ಬೆಂಬಲ ಸೌಲಭ್ಯಗಳೊಂದಿಗೆ ಆಂಬ್ಯುಲೆನ್ಸ್ ಸೇವೆ. ಪರೀಕ್ಷಾ ಸಾಮರ್ಥ್ಯ ಮತ್ತು ವೈದ್ಯಕೀಯ ಆಮ್ಲಜನಕದ ಲಭ್ಯತೆಯ ಪರಿಶೀಲನೆ, ಆರೋಗ್ಯ ಇಲಾಖೆ ರಾಜ್ಯಾದ್ಯಂತ ಸ್ಥಾಪಿಸಲಾಗಿರುವ ಆಕ್ಸಿಜನ್ ಪ್ಲಾಂಟ್, ಆಕ್ಸಿಜನ್ ಜನರೇಟರ್ ಪರೀಶೀಲನೆಯ ಜೊತೆಗೆ ಕೋವಿಡ್ ಉಪಕರಣಗಳು, ಸಿಬ್ಬಂದಿ ಹಾಗೂ ವ್ಯವಸ್ಥೆಗಳು ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿವೆಯೇ ಎಂಬುದನ್ನು ಪರಿಶೀಲಿಸಲು ಸೂಚನೆ ನೀಡಲಾಗಿದೆ.