IPL 2024: ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಬಿಗ್ ಟಾರ್ಗೆಟ್ ಟ್ರಾವಿಸ್ ಹೆಡ್

ಇಂಡಿಯನ್ ಪ್ರೀಮಿಯರ್ ಲೀಗ್​ ಲೀಗ್​ನ 17ನೇ ಆವೃತ್ತಿಯ ಹರಾಜು ಪ್ರಕ್ರಿಯೆ ನಾಳೆ ನಡೆಯಲಿದೆ. ಈ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಿಗ್ ಟಾರ್ಗೆಟ್ ಆಸ್ಟ್ರೇಲಿಯಾದ ವಿಶ್ವಕಪ್ ಹೀರೋ ಟ್ರಾವಿಸ್ ಹೆಡ್.

ಇದನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಅವರೇ ಖಚಿತಪಡಿಸಿದ್ದಾರೆ. ಕಳೆದ ಸೀಸನ್​ನಲ್ಲಿಯೇ ನಾವು ಟ್ರಾವಿಸ್ ಹೆಡ್ ಅವರನ್ನು ಖರೀದಿಸಲು ಪ್ಲ್ಯಾನ್ ರೂಪಿಸಿದ್ದೆವು. ಆದರೆ ಐಪಿಎಲ್ ವೇಳೆ ಆತನ ವಿವಾಹ ನಿಗದಿಯಾಗಿತ್ತು. ಹೀಗಾಗಿ ಹೆಡ್ ಐಪಿಎಲ್​ನಿಂದ ಹಿಂದೆ ಸರಿದಿದ್ದರು ಎಂದು ಪಾಂಟಿಂಗ್ ಹೇಳಿದ್ದಾರೆ.

ಒಂದು ವೇಳೆ ಅವರು ಕಳೆದ ಸೀಸನ್​ನಲ್ಲಿ ಇದ್ದಿದ್ರೆ ನಾವು ಬಿಡ್ ಮಾಡಲು ತಯಾರಿದ್ದೆವು. ಆದರೆ ಅವರು ಐಪಿಎಲ್ ವೇಳೆ ಮೂರು ವಾರಗಳ ಸಮಯಕಾಶ ಕೇಳಿದ್ದರು. ಹೀಗಾಗಿ ನಮ್ಮ ಫ್ರಾಂಚೈಸಿ ಬಿಡ್ ಮಾಡಲು ಆಸಕ್ತಿ ತೋರಲಿಲ್ಲ ಎಂದು ಪಾಂಟಿಂಗ್ ತಿಳಿಸಿದ್ದಾರೆ.

ಇದೀಗ ಟ್ರಾವಿಸ್ ಹೆಡ್ ಐಪಿಎಲ್​ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾದ ಸ್ಟಾರ್ ಆಟಗಾರನಿಗಾಗಿ ಕೋಚ್ ರಿಕಿ ಪಾಂಟಿಂಗ್ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್ ಬಿಡ್ಡಿಂಗ್ ನಡೆಸುವುದು ಖಚಿತ ಎನ್ನಬಹುದು. ಅತ್ತ ಹೆಡ್​ ಖರೀದಿಗಾಗಿ ಮತ್ತೆ ಕೆಲ ಫ್ರಾಂಚೈಸಿಗಳು ಆಸಕ್ತಿ ಹೊಂದಿದ್ದು, ಹೀಗಾಗಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

ಅಂದಹಾಗೆ ಟ್ರಾವಿಸ್ ಹೆಡ್ ಐಪಿಎಲ್​ನಲ್ಲಿ ಇದುವರೆಗೆ 10 ಪಂದ್ಯಗಳನ್ನಾಡಿದ್ದಾರೆ. 2016-17 ರಲ್ಲಿ ಆರ್​ಸಿಬಿ ಪರ ಹತ್ತು ಪಂದ್ಯಗಳನ್ನಾಡಿದ್ದ ಹೆಡ್ ಒಟ್ಟು 205 ರನ್​ ಕಲೆಹಾಕಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಆರ್​ಸಿಬಿ ಅವರನ್ನು ಬಿಡುಗಡೆ ಮಾಡಿತ್ತು. ಇದೀಗ ಭರ್ಜರಿ ಫಾರ್ಮ್​ನೊಂದಿಗೆ ಟ್ರಾವಿಸ್ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಮಾಜಿ ಆಟಗಾರನ ಖರೀದಿಗೆ ಆರ್​ಸಿಬಿ ಮುಂದಾಗುವ ಸಾಧ್ಯತೆಯಿದೆ.

ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿರುವ ಆಟಗಾರರು: ರಿಷಭ್ ಪಂತ್, ಪ್ರವೀಣ್ ದುಬೆ, ಡೇವಿಡ್ ವಾರ್ನರ್, ವಿಕ್ಕಿ ಓಸ್ತ್ವಾಲ್, ಪೃಥ್ವಿ ಶಾ, ಅನ್ರಿಕ್ ನೋಕಿಯಾ, ಅಭಿಷೇಕ್ ಪೊರೆಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಲುಂಗಿ ಎನ್‌ಗಿಡಿ, ಲಲಿತ್ ಯಾದವ್, ಖಲೀಲ್ ಅಹ್ಮದ್, ಮಿಚೆಲ್ ಮಾರ್ಷ್, ಇಶಾಂತ್ ಶರ್ಮಾ, ಇಶಾಂತ್ ಶರ್ಮಾ , ಮುಕೇಶ್ ಕುಮಾರ್.