ತರಗತಿ ಬಹಿಷ್ಕರಿಸಿ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೋಳಾಟ

ಗದಗ, ಡಿಸೆಂಬರ್​ 16: ನಗರದ ಹೊರವಲಯದ ನರಸಾಪುರದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 33 ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ 20 ದಿನಗಳಿಂದ ಪ್ರತಿಭಟನೆಗಿಳಿದಿದ್ದಾರೆ. ಪಾಠ ಮಾಡಬೇಕಾದ ಶಿಕ್ಷಕರೇ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದಾರೆ. ಹೀಗಾಗಿ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಸರ್ಕಾರ ಉಪನ್ಯಾಸಕರ ಹಗ್ಗಜಗ್ಗಾಟದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಸಮಸ್ಯೆ ಬಗೆಹರಿಸಿ ಇಲ್ಲವೇ ನಾವೂ ಹೋರಾಟಕ್ಕೆ ಇಳಿಯಬೇಕಾಗುತ್ತೆ ಅಂತ ವಿದ್ಯಾರ್ಥಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅನಕ್ಷರತೆ ತೊಲಿಗಿಸಲು ರಾಜ್ಯ, ಕೇಂದ್ರ ಸರ್ಕಾರಗಳು ಶಿಕ್ಷಣಕ್ಕೆ ಸಾವಿರಾರೂ ಕೋಟಿ ರೂ. ಅನುದಾನ ನೀಡುತ್ತಿವೆ. ಆದರೆ ಉಪನ್ಯಾಸಕರ ನೇಮಕ ಮಾತ್ರ ಮಾಡುತ್ತಿಲ್ಲ. ಇದು ಶಿಕ್ಷಣ ವ್ಯವಸ್ಥೆಯೇ ಹಾಳು ಮಾಡುತ್ತಿದೆ ಅನ್ನೋ ಗಂಭೀರ ಆರೋಪ ಕೇಳಿಬರುತ್ತಿದೆ. ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳು ಉಪನ್ಯಾಸಕರ ಕೊರತೆಯಿಂದ ಬಳಲುತ್ತಿವೆ. ಬರೀ ಅತಿಥಿ ಉಪನ್ಯಾಸಕರ ಇಟ್ಕೊಂಡು ಸಾಗಿ ಹಾಕ್ತಾಯಿದೆ. ಈಗ ಅತಿಥಿ ಉಪನ್ಯಾಸಕರು ಖಾಯಂ ಮಾಡಿಕೊಳ್ಳುವಂತೆ ಒತ್ತಾಯಿಸಿ ಕಳೆದ 20 ದಿನಗಳಿಂದ ಹೋರಾಟ ನಡೆಸಿದ್ದಾರೆ. ಸುಮ್ನೆ ಹೋರಾಟ ಅಲ್ಲ. ಪಾಠ ಮಾಡುವುದನ್ನು ಬಹಿಷ್ಕರಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ಧಿಷ್ಠಾವಧಿ ಧರಣಿ ನಡೆಸಿದ್ದಾರೆ.

ಅತಿಥಿ ಉಪನ್ಯಾಸಕರ ಹೋರಾಟ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬೀಳುವಂತೆ ಮಾಡಿದೆ. 20 ದಿನಗಳಿಂದ ಬಹುತೇಕ ವಿಷಯಗಳ ಪಾಠವೇ ನಡೆಯುತ್ತಿಲ್ಲ ಅಂತ ವಿದ್ಯಾರ್ಥಿಗಳು ರೊಚ್ಚಿಗೆದ್ದಿದ್ದಾರೆ. ಸರ್ಕಾರಿ ಪದವಿ ಕಾಲೇಜ್​ನಲ್ಲಿ ಕೇವಲ ಏಳು ಜನ ಮಾತ್ರ ಖಾಯಂ ಉಪನ್ಯಾಸಕರು ಇದ್ದಾರೆ. ಅತಿಥಿ ಉಪನ್ಯಾಸಕರ ಪ್ರತಿಭಟನೆ ಹಿನ್ನೆಯಲ್ಲಿ ಪಾಠ ಇಲ್ಲದೇ ಬಿಎ, ಬಿಎಸ್ಸಿ, ಬಿಕಾಂ, ಎಂಎ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವ ಎಂಬಂತೆ, ಸರ್ಕಾರ ಮತ್ತು ಅತಿಥಿ ಉಪನ್ಯಾಸಕರ ಹಗ್ಗಜಗ್ಗಾಟದಲ್ಲಿ ನಾವು ಬಳಲುತ್ತಿದ್ದೇವೆ ಅಂತ ವಿದ್ಯಾರ್ಥಿಗಳು ಗೋಳಾಡುತ್ತಿದ್ದಾರೆ.

ಅತಿಥಿ ಉಪನ್ಯಾಸರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ್ದಾರೆ. ಇತ್ತ ವಿದ್ಯಾರ್ಥಿಗಳಿಗೆ ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಭಯ ಶುರುವಾಗಿದೆ. ಸರ್ಕಾರಿ ಪದವಿ ಕಾಲೇಜ್ ನಲ್ಲಿ ಬಡ ಮಕ್ಕಳು ಬರ್ತಾರೆ. ನಾವು ದುಡಿದುಕೊಂಡೆ ಪದವಿ ಕಲಿಯುತ್ತಿದ್ದೇವೆ. ಆದರೆ ಇಲ್ಲಿ ಪಾಠ ಮಾಡಲು ಉಪನ್ಯಾಸಕರೇ ಬರುತ್ತಿಲ್ಲ. ಪಾಠ ಇಲ್ಲದೇ ಪರೀಕ್ಷೆ ಬರೆಯುವುದು ಹೇಗೆ ಅಂತ ವಿದ್ಯಾರ್ಥಿಗಳು ಪ್ರಶ್ನೆ ಮಾಡ್ತಾಯಿದ್ದಾರೆ. ಹೀಗಾಗಿ ಪರೀಕ್ಷೆ ಬಹಿಷ್ಕಾರ ಮಾಡ್ತೀವಿ ಅಂತಿದ್ದಾರೆ.

ಬಿಎಸ್ಸಿ ವಿದ್ಯಾರ್ಥಿಗಳಿಗೆ ಥೇರಿ, ಫ್ರ್ಯಾಕ್ಟಲ್ ಎಲ್ಲವೂ ಸಮಸ್ಯೆ ಆಗ್ತಿದೆ ಅಂತ ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ. ಇನ್ನೂ ಸಿಲ್ಯಾಬಸ್ ಕ್ಲಿಯರ್ ಆಗಿಲ್ಲ. ನಾವು ಪರೀಕ್ಷೆ ಪಾಸ್ ಆಗೋದು ಹೇಗೆ ಅಂತ ಸರ್ಕಾರಕ್ಕೆ ಪ್ರಶ್ನೆ ಮಾಡ್ತಾಯಿದ್ದಾರೆ. ಸರ್ಕಾರ ಕೂಡಲೇ ಸಮಸ್ಯೆ ಕ್ಲೀಯರ್ ಮಾಡಬೇಕು. ಇಲ್ಲವಾದ್ರೆ, ನಾವು ಸಹ ಸರಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಅಂತ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ಧಿಷ್ಠಾವಧಿ ಧರಣಿ ನಡೆಸಿದ್ದಾರೆ. ಬಹುತೇಕ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಸಂಖ್ಯೆಯೇ ಹೆಚ್ಚಾಗಿದೆ. ಹೀಗಾಗಿ ಕಳೆದ 20 ದಿನಗಳಿಂದ ಹೋರಾಟ ನಡೆಸುತ್ತಿರೋದ್ರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬಿರುತ್ತಿದೆ.

ಬಹುತೇಕ ವಿಷಯಗಳ ಉಪನ್ಯಾಸಕರು ಇಲ್ಲದೇ ಪರೀಕ್ಷೆ ಬರೆಯುವುದು ಹೇಗೆ ಅನ್ನೋ ಚಿಂತೆಯಲ್ಲಿದ್ದಾರೆ. ಇನ್ನಾದ್ರೂ ಶಿಕ್ಷಣದಂತೆ ಗಂಭೀರ ವಿಷಯ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ದೃಷ್ಠಿಯಿಂದ ಸರ್ಕಾರ ಎಚ್ಚೆತ್ತುಕೊಂಡು ಸಮಸ್ಯೆ ಇತ್ಯರ್ಥ ಮಾಡುವ ಮೂಲಕ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಅನುವು ಮಾಡಬೇಕಿದೆ.