ನವದೆಹಲಿ, ಡಿಸೆಂಬರ್ 16: ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂಜೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಜತೆಗೆ, ಇತ್ತೀಚೆಗೆ ವಿಧಾನಸಭಾ ಚುನಾವಣೆ ನಡೆದ ಐದು ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಗೆ ಮೋದಿ ಚಾಲನೆ ನೀಡಿದರು. ಇತರ ರಾಜ್ಯಗಳಲ್ಲಿ ಈ ಹಿಂದೆಯೇ ಪ್ರಾರಂಭವಾಗಿದ್ದ ಯಾತ್ರೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಐದು ರಾಜ್ಯಗಳಲ್ಲಿ ಆರಂಭಗೊಂಡಿರಲಿಲ್ಲ.
ಇತರ ರಾಜ್ಯಗಳಲ್ಲಿ ಈ ಹಿಂದೆಯೇ ಪ್ರಾರಂಭವಾಗಿದ್ದ ಯಾತ್ರೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಐದು ರಾಜ್ಯಗಳಲ್ಲಿ ಆರಂಭಗೊಂಡಿರಲಿಲ್ಲ.
ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆದ ವಿವಿಧ ರಾಜ್ಯಗಳ ಫಲಾನುಭವಿಗಳೊಂದಿಗೆ ಮೋದಿ ಸಂವಾದ ನಡೆಸಿದರು. ಅಂತಹ ಒಬ್ಬ ಫಲಾನುಭವಿಯೊಂದಿಗೆ ಸಂವಹನ ನಡೆಸುತ್ತಾ, ಅವರು ‘ಆತ್ಮ ನಿರ್ಭರ್’ಗೆ ಮಹಿಳೆಯರು ಕೂಡ ಉತ್ತಮ ಕೊಡುಗೆ ನೀಡುತ್ತಿದ್ದಾರೆ ಎಂದರು.
ನಮ್ಮ ಸರ್ಕಾರವು ಬದ್ಧತೆ ಮತ್ತು ಕಷ್ಟಪಟ್ಟು ದುಡಿಯುವ ಜನರಿಗಾಗಿ ಪಟ್ಟುಬಿಡದೆ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದರು. ಜತೆಗೆ, 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಕರೆ ನೀಡಿದರು.
ಇದಕ್ಕೂ ಮುನ್ನ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮಾತನಾಡಿ, ದೇಶದ ಜನರು ‘ಮೋದಿಜಿಯ ವಿಐಪಿ’ ಆಗಿರುವುದರಿಂದ ಪ್ರತಿಯೊಬ್ಬರ ಕೆಲಸಗಳನ್ನು ಈಗ ತ್ವರಿತವಾಗಿ ಮಾಡಿಕೊಡಲಾಗುತ್ತಿದೆ ಎಂದರು.
ಈವರೆಗೆ ಎಲ್ಲೆಲ್ಲಿ ನಡೆದಿದೆ ಯಾತ್ರೆ?
ಇಲ್ಲಿಯವರೆಗೆ ಕರ್ನಾಟಕದ ವಿವಿಧ ಜಿಲ್ಲೆಗಳು ಮತ್ತು ಗುಜರಾತ್‌ನ ಡ್ಯಾಂಗ್, ಜಮ್ಮು ಮತ್ತು ಕಾಶ್ಮೀರದ ರಾಜೌರಿ, ಉತ್ತರ ಮತ್ತು ಮಧ್ಯ ಅಂಡಮಾನ್, ಅರುಣಾಚಲ ಪ್ರದೇಶದ ತವಾಂಗ್, ಒಡಿಶಾದ ಕೋರಾಪುಟ್, ಮಹಾರಾಷ್ಟ್ರದ ನಾಂದೇಡ್, ಉತ್ತರಾಖಂಡದ ಚಂಪಾವತ್, ಬಾರಾಬಂಕಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಆಯೋಜಿಸಲಾಗಿದೆ. ಉತ್ತರ ಪ್ರದೇಶ ಮತ್ತು ಆಂಧ್ರ ಪ್ರದೇಶಕ್ಕೆ ಹೆಚ್ಚಿನ ಭಾಗಗಳನ್ನು ಯಾತ್ರೆ ತಲುಪಿದೆ. ಈ ವೇಳೆ ಕೇಂದ್ರ ಸರ್ಕಾರದ ಜನಕಲ್ಯಾಣ ಯೋಜನೆಗಳ ಮಾಹಿತಿ ನೀಡುವುದರೊಂದಿಗೆ ಜನಸಾಮಾನ್ಯರಿಗೂ ಆರೋಗ್ಯ ಸೌಲಭ್ಯಗಳನ್ನೂ ನೀಡಲಾಗುತ್ತಿದೆ.