ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕನನ್ನು ಇದಕ್ಕಿದಂತೆ ನಾಯಕತ್ವದಿಂದ ಕೆಳಗಿಳಿಸಿ ಕ್ರಿಕೆಟ್ ಲೋಕದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸ್ ಇದರ ಪರಿಣಾಮವನ್ನು ಬಹುಬೇಗನೇ ಅನುಭವಿಸುತ್ತಿದೆ. ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ಹಸ್ತಾಂತರಿಸಿದ್ದ ಮುಂಬೈ ಫ್ರಾಂಚೈಸಿ ಕೇವಲ ಒಂದೇ ಒಂದು ಗಂಟೆಯಲ್ಲಿ ಬರೋಬ್ಬರಿ 4 ಲಕ್ಷಕ್ಕೂ ಅಧಿಕ ಸೋಶಿಯಲ್ ಮೀಡಿಯಾ ಫಾಲೋವರ್ಸ್ಗಳನ್ನು ಕಳೆದುಕೊಂಡಿದೆ ಎಂದು ವರದಿಯಾಗಿದೆ.
4.5 ಲಕ್ಷ ಫ್ಯಾನ್ಸ್ ಅನ್‌ಫಾಲೋ
ವಾಸ್ತವವಾಗಿ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಅವರಿಂದ ನಾಯಕತ್ವವನ್ನು ಕಸಿದುಕೊಂಡು ಹಾರ್ದಿಕ್ ಪಾಂಡ್ಯಗೆ ಹಸ್ತಾಂತರಿಸಿತು. ಮುಂಬೈಯನ್ನು 5 ಬಾರಿ ಚಾಂಪಿಯನ್ ಮಾಡಿದ ರೋಹಿತ್ ಶರ್ಮಾ ಅವರನ್ನು ಐಪಿಎಲ್ 2024 ರ ಮೊದಲು ನಾಯಕತ್ವದಿಂದ ತೆಗೆದು, ಗುಜರಾತ್ ಟೈಟಾನ್ಸ್ ಪರ ಕಳೆದ ಎರಡು ಸೀಸನ್ ಆಡಿದ ಹಾರ್ದಿಕ್ ಪಾಂಡ್ಯಗೆ ನಾಯಕತ್ವವನ್ನು ನೀಡಲಾಯಿತು. ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಈ ನಿರ್ಧಾರದಿಂದ ಅಭಿಮಾನಿಗಳು ಆಕ್ರೋಶಗೊಂಡಿದ್ದು, ಸುಮಾರು 4.5 ಲಕ್ಷ ಅಭಿಮಾನಿಗಳು ತಂಡದ ಸೋಶಿಯಲ್ ಮೀಡಿಯಾ ಖಾತೆಯನ್ನು ಅನ್‌ಫಾಲೋ ಮಾಡಿದ್ದಾರೆ.
ಮುಂಬೈ ಇಂಡಿಯನ್ಸ್ ಶುಕ್ರವಾರದಂದು ಕೇವಲ ಇನ್ಸ್ಟಾಗ್ರಾಮ್ನಲ್ಲಿಯೇ ಸುಮಾರು 3 ಲಕ್ಷ ಅನುಯಾಯಿಗಳನ್ನು ಕಳೆದುಕೊಂಡಿದೆ. ಈ ಟ್ರೆಂಡ್ ಮರುದಿನ ಅಂದರೆ ಶನಿವಾರವೂ ಮುಂದುವರೆದಿದ್ದು, ಮಧ್ಯಾಹ್ನದ ಹೊತ್ತಿಗೆ ಮುಂಬೈ ಇಂಡಿಯನ್ಸ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಅನ್ನು 1 ಲಕ್ಷ 22 ಸಾವಿರ ಅಭಿಮಾನಿಗಳು ಅನ್‌ಫಾಲೋ ಮಾಡಿದ್ದಾರೆ.
ಟ್ವಿಟರ್‌ನಲ್ಲಿ ಸುಮಾರು 33 ಸಾವಿರ ಅಭಿಮಾನಿಗಳು
ಸೋಶಿಯಲ್ ಮೀಡಿಯಾ ಡೇಟಾವನ್ನು ಪ್ರದರ್ಶಿಸುವ ಕಂಪನಿಯಾದ ಸೋಶಿಯಲ್‌ಬ್ಲೇಡ್ ಪ್ರಕಾರ, ಸುಮಾರು 10 ಸಾವಿರ ಜನರು ಯೂಟ್ಯೂಬ್‌ನಿಂದ ಚಾನಲ್ ಅನ್ನು ಅನ್‌ಸಬ್‌ಸ್ಕ್ರೈಬ್ ಮಾಡಿದ್ದಾರೆ. ಹಾಗೆಯೇ ಟ್ವಿಟರ್‌ನಲ್ಲಿ ಸುಮಾರು 33 ಸಾವಿರ ಅಭಿಮಾನಿಗಳು ತಂಡವನ್ನು ತೊರೆದಿದ್ದಾರೆ. ಇನ್ನು ಇನ್ಸ್ಟಾಗ್ರಾಮ್ನಲ್ಲಿ ಡಿಸೆಂಬರ್ 15 ರಂದು 295,803 ಜನರು ತಂಡದ ಹ್ಯಾಂಡಲ್ ಅನ್ನು ಅನ್‌ಫಾಲೋ ಮಾಡಿದ್ದರೆ, ಡಿಸೆಂಬರ್ 16 ರ ಶನಿವಾರದಂದು 1 ಲಕ್ಷ 22 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಮುಂಬೈ ಇಂಡಿಯನ್ಸ್ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂದು ವರದಿ ಮಾಡಿದೆ. ಇದು ಸಾಲದೆಂಬಂತೆ ಇನ್ನು ಕೆಲವು ಅಭಿಮಾನಿಗಳು ಮುಂಬೈ ತಂಡದ ಜೆರ್ಸಿ ಹಾಗೂ ಕ್ಯಾಪ್ ಅನ್ನು ಸುಟ್ಟುಹಾಕಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.