ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಸಿದ್ದರಾಮಯ್ಯ ಭ್ರಷ್ಟಾಚಾರಿಯ ರಕ್ಷಣೆಗೆ ನಿಂತಿರುವುದು ದುರಂತ: ಯತ್ನಾಳ್ ಟ್ವೀಟ್

ವಿಜಯಪುರ, ಡಿ.16: ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯುವ ನಿರ್ಣಯವನ್ನು ಸಂಪುಟ ಅನುಮೋದಿಸಿರುವುದನ್ನು ವಿಪಕ್ಷ ಬಿಜೆಪಿ ಟೀಕಿಸುತ್ತಿದೆ. ಅಲ್ಲದೆ, ವಿಜಯಪುರ ನಗರ ಕ್ಷೇತ್ರದ ಶಾಸಕ  ಈಗಾಗಲೇ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಮತ್ತೆ ಟ್ವೀಟ್ ಮಾಡಿದ ಯತ್ನಾಳ್, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸಿಬಿಐ ತನಿಖೆಗೆ ಅನುಮತಿ ವಾಪಸಾತಿ ವಿರುದ್ಧ ನಾನು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ನಡೆಸಿದೆ. ಭ್ರಷ್ಟಾಚಾರದ ವಿರುದ್ಧ ದಿನಂಪ್ರತಿ ಮಾತನಾಡುವ ಸಿದ್ದರಾಮಯ್ಯ, ಭ್ರಷ್ಟ್ರಾಚಾರಿಯ ರಕ್ಷಣೆಗೆ ನಿಂತಿರುವುದು ದುರಂತ ಎಂದು ಯತ್ನಾಳ್ ಟ್ವೀಟ್ ಮಾಡಿದ್ದಾರೆ.

ಸಿಬಿಐ ತನಿಖೆಗೆ ಅನುಮತಿ ವಾಪಸಾತಿ ವಿರುದ್ಧ ನಾನು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ನಡೆಸಿದೆ.

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಅಂದಿನ ಬಿಜೆಪಿ ಸರ್ಕಾರ ಅನುಮತಿ ನೀಡಿತ್ತು. ಆದರೆ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ನಡೆದ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಬಿಜೆಪಿ ಸರ್ಕಾರ ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯುವ ನಿರ್ಣಯ ಪ್ರಸ್ತಾಪಿಸಲಾಗಿತ್ತು. ಇದಕ್ಕೆ ಸಂಪುಟವು ಅನುಮೋದಿಸಿದೆ.

ಇದರ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ಹೊರಹಾಕುತ್ತಿದ್ದು, ಸರ್ಕಾರದ ನಡೆ ಪ್ರಶ್ನಿಸಿ ಯತ್ನಾಳ್ ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಅದರಂತೆ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ಸರ್ಕಾರದ ಆದೇಶಕ್ಕೆ ಸಂಬಂಧಿಸಿದಂತೆ ವಾದ ಮಂಡಿಸಲು ಸರ್ಕಾರಕ್ಕೆ ನಿರ್ದೇಶಿಸಿತು. ಜನವರಿ 5 ರಂದು ಅಡ್ವೊಕೇಟ್ ಜನರಲ್ ಅವರು ವಿಸ್ತೃತವಾಗಿ ಉತ್ತರ ನೀಡುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.

ಸರ್ಕಾರದ ಕ್ರಮದಿಂದ ನೀವು ಹೇಗೆ ಬಾದಿತರಾಗುತ್ತೀರಾ? ನಿಮ್ಮ ಯಾವ ಹಕ್ಕು ನಷ್ಟವಾಗಿದೆ ಎಂದು ಅರ್ಜಿ ಸಲ್ಲಿಸಿದ್ದೀರಾ. ನೀವು ಪಿಐಎಲ್‌ ಸಲ್ಲಿಸದೇ ರಿಟ್ ಸಲ್ಲಿಸಿರುವುದೇಕೆ ಎಂದು ಶಾಸಕ ಯತ್ನಾಳ್ ಪರ ವಕೀಲರಿಗೆ ಹೈಕೋರ್ಟ್ ನ್ಯಾ.ಎಂ.ನಾಗಪ್ರಸನ್ನ ಪ್ರಶ್ನೆ ಮಾಡಿದ್ದಾರೆ. ಕ್ರಿಮಿನಲ್ ಪ್ರಕರಣವನ್ನು ಯಾರಾದರೂ ದಾಖಲಿಸಬಹುದೆಂಬ ತೀರ್ಪಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿ ಯತ್ನಾಳ್ ಪರ ವೆಂಕಟೇಶ್ ದಳವಾಯಿ ವಾದ ಮಂಡಿಸಿದ್ದಾರೆ.