ಟೀಮ್ ಇಂಡಿಯಾಗೆ ಹೊಸ ಕೋಚ್ ನೇಮಕ..!

ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾದ ಮುಖ್ಯ ಕೋಚ್ ಬದಲಾಗಿದ್ದಾರೆ. ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಬದಲಿಗೆ ಸಿತಾಂಶು ಕೋಟಕ್​ಗೆ ಜವಾಬ್ದಾರಿವಹಿಸಲಾಗಿದೆ. ಈ ಹಿಂದೆ ನ್ಯಾಷನಲ್​ ಕ್ರಿಕೆಟ್ ಅಕಾಡೆಮಿಯಲ್ಲಿ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿದ್ದ ಸಿತಾಂಶು ಕೋಟಕ್ ಟೀಮ್ ಇಂಡಿಯಾದ ಕೋಚ್ ಆಗಿ ಕಾಣಿಸಿಕೊಳ್ಳುತ್ತಿರುವುದು ಇದು 2ನೇ ಬಾರಿ. ಇದಕ್ಕೂ ಮುನ್ನ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವರು ತರಬೇತುದಾರಾಗಿ ಕಾಣಿಸಿಕೊಂಡಿದ್ದರು.

ಇದೀಗ ಟಿ20 ಸರಣಿಯ ಬೆನ್ನಲ್ಲೇ ರಾಹುಲ್ ದ್ರಾವಿಡ್ ಅವರು ವಿಶ್ರಾಂತಿ ಪಡೆದಿದ್ದಾರೆ. ಹೀಗಾಗಿ ಮುಖ್ಯ ಕೋಚ್ ಆಗಿ ಸಿತಾಂಶು ಕೋಟಕ್ ಅವರನ್ನು ನೇಮಕ ಮಾಡಲಾಗಿದೆ. ಇನ್ನು ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ವೇಳೆ ರಾಹುಲ್ ದ್ರಾವಿಡ್ ಮತ್ತೆ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ. ಅಂದರೆ ರಾಹುಲ್ ದ್ರಾವಿಡ್ ಏಕದಿನ ಸರಣಿಯಿಂದ ಮಾತ್ರ ಹೊರಗುಳಿದಿದ್ದಾರೆ.

ಇನ್ನು ಸಿತಾಂಶು ಕೋಟಕ್ ಅವರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿ ಅಜಯ್ ರಾತ್ರಾ ಹಾಗೂ ಬೌಲಿಂಗ್ ಕೋಚ್ ಆಗಿ ರಾಜಿಬ್ ದತ್ತಾ ಕಾರ್ಯನಿರ್ವಹಿಸಲಿದ್ದಾರೆ. ಭಾರತ-ಸೌತ್ ಆಫ್ರಿಕಾ ನಡುವಣ ಏಕದಿನ ಸರಣಿಯು ಡಿಸೆಂಬರ್ 17 ರಿಂದ ಶುರುವಾಗಲಿದೆ. ಇದಾದ ಬಳಿಕ ಡಿಸೆಂಬರ್ 26 ರಿಂದ ಟೆಸ್ಟ್ ಸರಣಿ ಪ್ರಾರಂಭವಾಗಲಿದೆ.

ಏಕದಿನ ಸರಣಿ ವೇಳಾಪಟ್ಟಿ:

  • ಡಿಸೆಂಬರ್ 17- ಮೊದಲ ಏಕದಿನ ಪಂದ್ಯ (ಜೋಹಾನ್ಸ್​ಬರ್ಗ್​)
  • ಡಿಸೆಂಬರ್ 19- ಎರಡನೇ ಏಕದಿನ ಪಂದ್ಯ (ಗೆಬರ್ಹ)
  • ಡಿಸೆಂಬರ್ 21- ಮೂರನೇ ಏಕದಿನ ಪಂದ್ಯ (ಪಾರ್ಲ್​)

ಟೆಸ್ಟ್ ಸರಣಿ ವೇಳಾಪಟ್ಟಿ:

  • ಡಿಸೆಂಬರ್ 26 ರಿಂದ- ಮೊದಲ ಟೆಸ್ಟ್ ಪಂದ್ಯ (ಸೆಂಚುರಿಯನ್)
  • ಜನವರಿ 3 ರಿಂದ- ಎರಡನೇ ಟೆಸ್ಟ್ ಪಂದ್ಯ (ಕೇಪ್​ಟೌನ್)

ಭಾರತ ಏಕದಿನ ತಂಡ: ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಾಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಾಹಲ್ , ಮುಕೇಶ್ ಕುಮಾರ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ದೀಪಕ್ ಚಹರ್.

ಭಾರತ ಟೆಸ್ಟ್​ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ.