ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 47 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡಕ್ಕೆ ಆ ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಆಸರೆಯಾಗಿ ನಿಂತಿದ್ದರು.
ಚೊಚ್ಚಲ ಪಂದ್ಯವಾಡಿದ್ದ ಶುಭಾ ಸತೀಶ್ (69), ಜೆಮಿಮಾ ರೊಡ್ರಿಗಾಸ್ (68) ಅರ್ಧಶತಕಗಳ ಕಾಣಿಕೆ ನೀಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರೆ, ಆ ಬಳಿಕ ಯಾಸ್ತಿಕಾ ಭಾಟಿಯಾ (66) ಹಾಗೂ ದೀಪ್ತಿ ಶರ್ಮಾ (67) ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಈ ಮೂಲಕ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 428 ರನ್ ಕಲೆಹಾಕಿ ಆಲೌಟ್ ಆಯಿತು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಟೀಮ್ ಇಂಡಿಯಾ ಬೌಲರ್ಗಳ ನಿಖರ ದಾಳಿಯಿಂದಾಗಿ ತತ್ತರಿಸಿತು. ಅದರಲ್ಲೂ ಸ್ಪಿನ್ನರ್ ದೀಪ್ತಿ ಶರ್ಮಾ ಅವರ ಎಸೆತಗಳನ್ನು ಎದುರಿಸಲು ತಡಕಾಡಿದ ಇಂಗ್ಲೆಂಡ್ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು.
ಪರಿಣಾಮ ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ಕೇವಲ 136 ರನ್ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾ ಪರ ದೀಪ್ತಿ ಶರ್ಮಾ 7 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಸ್ನೇಹ್ ರಾಣ 2 ವಿಕೆಟ್ ಪಡೆದು ಮಿಂಚಿದರು.
292 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ಶಫಾಲಿ ವರ್ಮಾ (33) ಹಾಗೂ ಸ್ಮೃತಿ ಮಂಧಾನ (26) ಉತ್ತಮ ಆರಂಭ ಒದಗಿಸಿದ್ದರು. ಆ ಬಳಿಕ ಕಣಕ್ಕಿಳಿದ ಜೆಮಿಮಾ 27 ರನ್ಗಳ ಕೊಡುಗೆ ನೀಡಿದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್ ಅಜೇಯ 44 ರನ್ ಬಾರಿಸಿದರು.
ಈ ಮೂಲಕ ಟೀಮ್ ಇಂಡಿಯಾ 6 ವಿಕೆಟ್ ಕಳೆದುಕೊಂಡು 186 ರನ್ಗಳಿಸಿ 2ನೇ ದಿನದಾಟ ಅಂತ್ಯಗೊಳಿಸಿತ್ತು. ಆದರೆ ಮೂರನೇ ದಿನದಾಟದ ಆರಂಭಕ್ಕೂ ಮುನ್ನ ಡಿಕ್ಲೇರ್ ಘೋಷಿಸಿ ಇಂಗ್ಲೆಂಡ್ ತಂಡವನ್ನು ದ್ವಿತೀಯ ಇನಿಂಗ್ಸ್ಗೆ ಆಹ್ವಾನಿಸಿತು.
479 ರನ್ಗಳ ಗುರಿಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಯಶಸ್ವಿಯಾದರು. ಟ್ಯಾಮಿ (17)ಯನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ರೇಣುಕಾ ಸಿಂಗ್ ಮೊದಲ ಯಶಸ್ಸು ತಂದುಕೊಟ್ಟರೆ, ಇದರ ಬೆನ್ನಲ್ಲೇ ಪೂಜಾ ವಸ್ತ್ರಾಕರ್ ಸೋಫಿಯಾ ಡಂಕ್ಲಿ (15), ನ್ಯಾಟ್ ಸ್ಕಿವರ್-ಬ್ರಂಟ್ (0) ಹಾಗೂ ಹೀದರ್ ನೈಟ್ (21) ವಿಕೆಟ್ ಪಡೆದರು.
ಮತ್ತೊಂದೆಡೆ ಡೇನಿಯಲ್ ವ್ಯಾಟ್ (12) ಹಾಗೂ ಆಮಿ ಜೋನ್ಸ್ (5) ಗೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ದೀಪ್ತಿ ಶರ್ಮಾ ಯಶಸ್ವಿಯಾದರು. ಆ ಬಳಿಕ ಸೋಫಿ ಎಕ್ಲೆಸ್ಟೋನ್ (10) ರಾಜೇಶ್ವರಿ ಗಾಯಕ್ವಾಡ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
ಅಂತಿಮವಾಗಿ ಇಂಗ್ಲೆಂಡ್ ತಂಡವನ್ನು ಕೇವಲ 131 ರನ್ಗಳಿಗೆ ಆಲೌಟ್ ಮಾಡುವ ಮೂಲಕ ಟೀಮ್ ಇಂಡಿಯಾ 347 ರನ್ಗಳ ಅಮೋಘ ಗೆಲುವು ದಾಖಲಿಸಿದೆ. ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ ಕಬಳಿಸಿದ್ದ ದೀಪ್ತಿ ಶರ್ಮಾ ದ್ವಿತೀಯ ಇನಿಂಗ್ಸ್ನಲ್ಲೂ 4 ವಿಕೆಟ್ ಉರುಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.
ಭಾರತ ಪ್ಲೇಯಿಂಗ್ XI: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಸ್ನೇಹ ರಾಣಾ, ಶುಭಾ ಸತೀಶ್, ಪೂಜಾ ವಸ್ತ್ರಾಕರ್, ರೇಣುಕಾ ಠಾಕೂರ್ ಸಿಂಗ್, ರಾಜೇಶ್ವರಿ ಗಾಯಕ್ವಾಡ್.
ಇಂಗ್ಲೆಂಡ್ ಪ್ಲೇಯಿಂಗ್ XI: ಟಮ್ಮಿ ಬ್ಯೂಮಾಂಟ್, ಸೋಫಿಯಾ ಡಂಕ್ಲಿ, ಹೀದರ್ ನೈಟ್ (ನಾಯಕಿ), ನ್ಯಾಟ್ ಸ್ಕೈವರ್-ಬ್ರಂಟ್, ಡೇನಿಯಲ್ ವ್ಯಾಟ್, ಆಮಿ ಜೋನ್ಸ್ (ವಿಕೆಟ್ ಕೀಪರ್), ಸೋಫಿ ಎಕ್ಲೆಸ್ಟೋನ್, ಷಾರ್ಲೆಟ್ ಡೀನ್, ಕೇಟ್ ಕ್ರಾಸ್, ಲಾರೆನ್ ಫೈಲರ್, ಲಾರೆನ್ ಬೆಲ್.