KKR ತಂಡಕ್ಕೆ ಶ್ರೇಯಸ್ ಅಯ್ಯರ್ ಕ್ಯಾಪ್ಟನ್

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು  ಮುನ್ನಡೆಸಲಿದ್ದಾರೆ. ಕಳೆದ ಸೀಸನ್​ನಲ್ಲಿ ಕೆಕೆಆರ್ ತಂಡದ ನಾಯಕರಾಗಿದ್ದ ನಿತೀಶ್ ರಾಣಾ ಈ ಬಾರಿ ಉಪನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ಐಪಿಎಲ್ 2022 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಿದ್ದರು. ಈ ವೇಳೆ ಕೆಕೆಆರ್ ತಂಡ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಇದಾಗ್ಯೂ 401 ರನ್​ ಕಲೆಹಾಕುವ ಮೂಲಕ ಕ್ಯಾಪ್ಟನ್ ಅಯ್ಯರ್ ಮಿಂಚಿದ್ದರು.

ಆದರೆ 2023 ರಲ್ಲಿ ಗಾಯಗೊಂಡಿದ್ದ ಹಿನ್ನಲೆ ಶ್ರೇಯಸ್ ಅಯ್ಯರ್ ಐಪಿಎಲ್​ನಿಂದ ಹಿಂದೆ ಸರಿದಿದ್ದರು. ಹೀಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಹೊಸ ನಾಯಕನಾಗಿ ನಿತೀಶ್ ರಾಣಾ ಅವರನ್ನು ಆಯ್ಕೆ ಮಾಡಲಾಗಿತ್ತು.

ಇದೀಗ ಕೆಕೆಆರ್ ಪರ ಮತ್ತೆ ಕಣಕ್ಕಿಳಿಯಲು ಸಜ್ಜಾಗಿರುವ ಶ್ರೇಯಸ್ ಅಯ್ಯರ್​​ಗೆ ಮತ್ತೆ ನಾಯಕನ ಸ್ಥಾನ ನೀಡಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಅದರಂತೆ ಐಪಿಎಲ್ ಸೀಸನ್ 17 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಶ್ರೇಯಸ್ ಮುನ್ನಡೆಸಲಿದ್ದಾರೆ.

12 ಆಟಗಾರರನ್ನು ರಿಲೀಸ್ ಮಾಡಿದ ಕೆಕೆಆರ್:

ಈ ಬಾರಿಯ ಐಪಿಎಲ್​ಗೂ ಮುನ್ನ ಕೆಕೆಆರ್ ಫ್ರಾಂಚೈಸಿ ಒಟ್ಟು 12 ಆಟಗಾರರನ್ನು ಬಿಡುಗಡೆ ಮಾಡಿದೆ. ಹಾಗೆಯೇ 15 ಆಟಗಾರರನ್ನು ಉಳಿಸಿಕೊಂಡಿದೆ. ಅಂದರೆ ಈ ಮಿನಿ ಹರಾಜಿನ ಮೂಲಕ ಕೆಕೆಆರ್ ಒಟ್ಟು 10 ಆಟಗಾರರನ್ನು ಖರೀದಿಸುವ ಅವಕಾಶವನ್ನು ಹೊಂದಿದೆ. ಹೀಗಾಗಿ ಈ ಬಾರಿ ಕೆಕೆಆರ್ ತಂಡದಲ್ಲಿ ಕೆಲ ಹೊಸ ಮುಖಗಳು ಕಾಣಿಸಿಕೊಳ್ಳುವುದು ಖಚಿತ ಎನ್ನಬಹುದು.

ಕೋಲ್ಕತ್ತಾ ನೈಟ್ ರೈಡರ್ಸ್ ​ ಬಿಡುಗಡೆ ಮಾಡಿದ ಆಟಗಾರರು: ಶಕೀಬ್ ಅಲ್ ಹಸನ್, ಲಿಟ್ಟನ್ ದಾಸ್, ಆರ್ಯ ದೇಸಾಯಿ, ಡೇವಿಡ್ ವೀಝ, ಶಾರ್ದೂಲ್ ಠಾಕೂರ್, ನಾರಾಯಣ್ ಜಗದೀಸನ್, ಮಂದೀಪ್ ಸಿಂಗ್, ಕುಲ್ವಂತ್ ಖೆಜ್ರೋಲಿಯಾ, ಲಾಕಿ ಫರ್ಗುಸನ್, ಉಮೇಶ್ ಯಾದವ್, ಟಿಮ್ ಸೌಥಿ, ಜಾನ್ಸನ್ ಚಾರ್ಲ್ಸ್.

ಕೋಲ್ಕತ್ತಾ ನೈಟ್ ರೈಡರ್ಸ್ ಉಳಿಸಿಕೊಂಡಿರುವ ಆಟಗಾರರು: ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ರಹಮಾನುಲ್ಲಾ ಗುರ್ಬಾಝ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅನುಕೂಲ್ ರಾಯ್, ರಿಂಕು ಸಿಂಗ್, ವೈಭವ್ ಅರೋರಾ, ಸುಯಶ್ ಶರ್ಮಾ, ಕುಲ್ವಂತ್ ಖೆಜ್ರೋಲಿಯಾ, ಮನ್‌ದೀಪ್ ಸಿಂಗ್, ಜೇಸನ್ ರಾಯ್.