ಮೈಸೂರು, ಡಿಸೆಂಬರ್ 10: ಕುಡಿದು ಗಲಾಟೆ ಮಾಡುತ್ತಿದ್ದ ಪ್ರಭಾವಿ ಮಕ್ಕಳನ್ನು ಪ್ರಶ್ನಿಸಿದ್ದಕ್ಕೆ ಕಾನ್ಸ್ಟೇಬಲ್ಗಳಿಗೆ ಪೋಲಿಸ್ ಇಲಾಖೆ ವರ್ಗಾವಣೆಯ ಶಿಕ್ಷೆ ನೀಡಿತೇ ಎಂಬ ಪ್ರಶ್ನೆ ಉದ್ಭವವಾಗಿದೆ. ಕೆ.ಆರ್.ನಗರ ಠಾಣೆಯ ಪೊಲೀಸ್ ಪೇದೆಗಳಾದ ಪುನೀತ್, ಹರೀಶ್ ವರ್ಗಾವಣೆಗೊಂಡ ಅಧಿಕಾರಿಗಳು.
ಐದು ದಿನಗಳ ಹಿಂದೆ ಕೆ.ಆರ್.ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೂತು ಕುಡಿಯುತ್ತಿದ್ದ ಯುವಕರನ್ನು ಪೊಲೀಸರು ಪ್ರಶ್ನಿಸಿದ್ದರು. ಪ್ರಶ್ನಿಸಿದ್ದಕ್ಕೆ ಪೊಲೀಸರ ಜೊತೆ ಕೆ.ಆರ್.ನಗರ ತಾಲೂಕು ಕಾಂಗ್ರೆಸ್ ಮಾಜಿ ಅಧ್ಯಕ್ಷ ಚೀರನಹಳ್ಳಿ ಶಿವಣ್ಣ ಪುತ್ರ ಸುನೀಲ್ ಮತ್ತು ಆತನ ಸ್ನೇಹಿತರು ಗಲಾಟೆ ಮಾಡಿದ್ದರು. ಪೇದೆಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಯುವಕರು ಬೈದಿದ್ದರು. ಅಲ್ಲದೆ ನಿಮ್ಮನ್ನು ಇಲ್ಲಿಂದ ಎತ್ತಂಗಡಿ ಮಾಡಿಸುತ್ತೇವೆ ಅಂತ ಯುವಕರು ಪೊಲೀಸರಿಗೆ ದಮ್ಕಿ ಹಾಕಿದ್ದರು ಎನ್ನಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಚೀರನಹಳ್ಳಿ ಶಿವಣ್ಣ ಮಗನಿಗೆ ಬುದ್ಧಿ ಹೇಳಿ ಕಳುಹಿಸಿದ್ದರು. ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಗಲಾಟೆ ನಡೆದ ಮರುದಿನವೇ ಇಬ್ಬರು ಪೊಲೀಸ್ ಪೇದೆಗಳು ವರ್ಗಾವಣೆಯಾಗಿದ್ದಾರೆ.
ಹರೀಶ್ ಕೆ.ಆರ್.ನಗರ ಠಾಣೆಯಿಂದ ಬಿಳಿಕೆರೆ ಠಾಣೆಗೆ ವರ್ಗಾವಣೆಯಾಗಿದ್ದಾರೆ. ಪುನೀತ್ ನಂಜನಗೂಡು ಸಂಚಾರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ. ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾವಣೆ ಅಂತ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಪ್ರಭಾವಿ ಮಕ್ಕಳನ್ನು ಪ್ರಶ್ನಿಸಿದ್ದಕ್ಕೆ, ಪೊಲೀಸ್ ಇಲಾಖೆ ಕಾನ್ಸ್ಟೇಬಲ್ಗಳಿಗೆ ವರ್ಗಾವಣೆಯ ಶಿಕ್ಷೆ ನೀಡಿತೆ ಎಂಬ ಪ್ರಶ್ನೆ ಉದ್ಭವವಾಗಿದೆ.