ಕಾರವಾರ : ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಅವರಿಗೆ ವಿಶ್ವವಾಣಿ ಪತ್ರಿಕಾ ಸಂಸ್ಥೆ ನೀಡುವ ಅಂತಾರಾಷ್ಟ್ರೀಯ ಪ್ರಶಸ್ತಿ ಗ್ಲೋಬಲ್ ಅಚೀವರ್ಸ್ ಅವಾರ್ಡಗೆ ಪಾತ್ರರಾಗಿದ್ದು, ಗುರುವಾರ ಕಾಂಬೋಡಿಯಾದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಕಾಂಬೋಡಿಯಾದ ರಾಯಭಾರಿ, ಜನಪ್ರತಿನಿಧಿಗಳು, ಕೈಗಾರಿಕೋದ್ಯಮಿಗಳು ಸೇರಿದಂತೆ ಹಲವು ಗಣ್ಯರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ರೂಪಾಲಿ ಎಸ್.ನಾಯ್ಕ ಮಹಿಳಾ ಜನಪ್ರತಿನಿಧಿಯಾಗಿ ಸಲ್ಲಿಸಿದ ಸಮಾಜ ಸೇವೆ, ಸಂಘಟನೆ, ಜನಸೇವೆ ಪರಿಗಣಿಸಿ ಸಾರ್ವಜನಿಕ ಕ್ಷೇತ್ರದಲ್ಲಿ ಕನ್ನಡನಾಡಿಗೆ ಅನನ್ಯ ಸಾಧನೆಗಾಗಿ ವಿದೇಶದ ಪ್ರತಿಷ್ಠಿತ ವೇದಿಕೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಕಾಂಬೋಡಿಯಾ ಕೌನ್ಸಲೇಟ್ ಸಹಯೋಗದಲ್ಲಿ ಪ್ರದಾನ ಮಾಡಲಾಗುತ್ತಿದೆ. ಸಮಾರಂಭದಲ್ಲಿ ಕಾಂಬೋಡಿಯಾ ದೇಶದ ಪ್ರಸಿದ್ಧ ಕಲಾವಿದರು ಕಲಾ ಪ್ರದರ್ಶನ ನೀಡಲಿದ್ದಾರೆ.
ಶ್ರೀಮತಿ ರೂಪಾಲಿ ಎಸ್.ನಾಯ್ಕ ಕೇವಲ ಶಾಸಕರಾಗಿ ಅಷ್ಟೇ ಅಲ್ಲ, ಮಾನವೀಯತೆ ನೆಲೆಯಲ್ಲಿ ವೈಯಕ್ತಿಕ ನೆಲೆಯಲ್ಲೂ ಸೇವೆ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ಕೈಗೊಂಡ ಐತಿಹಾಸಿಕ ಸಂಘಟನೆ. ಕೊರೋನಾ, ಪ್ರವಾಹದಂತಹ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಜನತೆಗೆ ಸ್ಪಂದಿಸಿದ ಪರಿ. ಒಬ್ಬ ಮಹಿಳೆಯಾಗಿ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆ ಇವೆಲ್ಲವನ್ನೂ ಪರಿಶೀಲಿಸಿದ ವಿಶ್ವವಾಣಿ ಮಾಧ್ಯಮ ಸಂಸ್ಥೆ ತನ್ನ 9ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿಗೆ ರೂಪಾಲಿ ಎಸ್.ನಾಯ್ಕ ಅವರನ್ನು ಆಯ್ಕೆ ಮಾಡಿದೆ.