ದೆಹಲಿಗೆ ಹೋಗುವುದು ನಿಶ್ಚಿತ, ಖಚಿತ: ಬಿಜೆಪಿಯಲ್ಲಿ ಹಲ್​ ಚಲ್ ಬಸನಗೌಡ ಪಾಟೀಲ್ ಯತ್ನಾಳ್

ಬೆಳಗಾವಿ, (ಡಿಸೆಂಬರ್ 06): ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನ ಕಟ್ಟಿಹಾಕಲು ವಿಪಕ್ಷ ಬಿಜೆಪಿ ಸಜ್ಜಾಗಿದೆ. ಆದ್ರೆ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷಕ್ಕೆ ವಿಪಕ್ಷದಂತಾಗಿದ್ದಾರೆ. ರಾಜ್ಯಾಧ್ಯಕ್ಷ ಅಥವಾ ವಿಪಕ್ಷ ನಾಯಕ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಕೆಲ ಬಿಜೆಪಿ ಶಾಸಕರು ದೆಹಲಿಗೆ ತೆರಳಲು ಸಜ್ಜಾಗಿದ್ದಾರೆ. ಈ ಪಟ್ಟಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಸಹ ಇದೆ. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯತ್ನಾಳ್, ದೆಹಲಿಗೆ ಹೋಗುವುದು ನಿಶ್ಚಿತ, ಖಚಿತ. ಆದ್ರೆ, ಉಚಿತ ಮಾತ್ರ ಅಲ್ಲ, ಹಣ ಕೊಟ್ಟು ಟಿಕೆಟ್ ಪಡೆದು ಹೋಗಬೇಕು ಎಂದರು.

ಬೆಳಗಾವಿಯಲ್ಲಿ ಇಂದು(ಡಿಸೆಂಬರ್ 06) ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ನಾನಾಗಿಯೇ ದೆಹಲಿಗೆ ಹೋಗಲ್ಲ, ಕರೆ ಬಂದ ಮೇಲೆ ಹೋಗುತ್ತೇನೆ. ಯಾವಾಗ ಕರೆ ಬರುತ್ತದೆಯೋ ಆಗ ದೆಹಲಿಗೆ ಹೋಗುತ್ತೇನೆ. ಶಾಸಕ ರಮೇಶ್ ಜಾರಕಿಹೊಳಿ‌ ಸೇರಿದಂತೆ ಹಲವರಿಗೆ ಹೇಳಿರಬಹುದು. ಇಬ್ಬರು ಮಹಾನುಭಾವರಿಂದ ಕರ್ನಾಟಕದಲ್ಲಿ ಈ ಪರಿಸ್ಥಿತಿ ಬಂದಿದೆ. ದೆಹಲಿಯ ಒಬ್ಬರು, ಕರ್ನಾಟಕ ಒಬ್ಬರು ಇದ್ದಾರೆ ಎಂದು ಸ್ವಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದರು.

ಇನ್ನು ಇದೇ ವೇಳೆ ವಿಪಕ್ಷ ಉಪನಾಯಕನಾಗಿ ಅರವಿಂದ್ ಬೆಲ್ಲದ್ ಆಯ್ಕೆ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ವಿಧಾನಸಭೆ ವಿಪಕ್ಷ ಉಪನಾಯಕನಿಗೆ ಯಾವ ಪವರ್ ಇರಲ್ಲ. ಏನೋ ಕೊಡಬೇಕೆಂದು ಕೊಡುತ್ತಿರಬೇಕು ಅಷ್ಟೇ. ಎಲ್ಲಾ ತೀರ್ಮಾನ ವಿಪಕ್ಷ ನಾಯಕ, ಅಧ್ಯಕ್ಷರು ತೆಗೆದುಕೊಳ್ಳುತ್ತಾರೆ. ಉಪನಾಯಕ ಅಂದ್ರೆ ವಿಪಕ್ಷ ನಾಯಕನ ಬಳಿ ಕೂರಬೇಕು ಅಷ್ಟೇ. ಈಗ ಡೆಪ್ಯೂಟಿ ಸ್ಪೀಕರ್ ಇಲ್ವಾ ಅದೇ ರೀತಿ ಕೂರಬೇಕು ಅಷ್ಟೇ. ಉಪನಾಯಕನಿಗೆ ಸಮಾಜದಲ್ಲೂ ಗೌರವ ಸಿಗಲ್ಲ. ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದರು

ಇಂದು ಸಿದ್ಧಗಂಗಾ ಮಠದಲ್ಲಿ ಗುರುಭವನ ಉದ್ಘಾಟನಾ ಕಾರ್ಯಕ್ರಮ ಮುಗಿದ ಬಳಿಕ ಮಾಜಿ ಸಚಿವ ವಿ ಸೋಮಣ್ಣ ಜೊತೆ ಕೆಲ ಅಸಮಾಧಾನಿತ ಶಾಸಕರು ದೆಹಲಿಗೆ ತೆರಳಲಿದ್ದಾರೆ. ರಮೇಶ್ ಜಾರಕಿಹೊಳಿ, ವಿ ಸೋಮಣ್ಣ, ಅರವಿಂದ್ ಬೆಲ್ಲದ್ ಮತ್ತು ಬಸನಗೌಡ ಪಾಟೀಲ್ ಯತ್ನಾಲ್ ಸಹ ದೆಹಲಿಗೆ ತೆರಳಿ ಹೈಕಮಾಂಡ್​ ನಾಯಕರ ಜತೆ ಚರ್ಚೆ ಮಾಡಲಿದ್ದಾರೆ ಎನ್ನುವ ಸುದ್ದಿ ಇದೆ. ಆದ್ರೆ, ಸೋಮಣ್ಣ ಹೋಗುವುದು ಖಚಿತವಾಗಿದೆ. ಇನ್ನುಳಿದಂತೆ ಯತ್ನಾಳ್ ಹೈಕಮಾಂಡ್​ನಿಂದ ಕರೆ ಬರುವವರೆಗೂ ದೆಹಲಿ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದ್ರೆ, ಅರವಿಂದ್ ಬೆಲ್ಲದ್, ರಮೇಶ್ ಜಾರಕಿಹೊಳಿ ದೆಹಲಿ ಪ್ರಯಾಣದ ಬಗ್ಗೆ ಇನ್ನೂ ಖಚಿತ ಮಾಹಿತಿ ಸಿಕ್ಕಿಲ್ಲ. ಒಂದಂತೂ ಸತ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ಒಂದು ರೀತಿಯ ಅಸಮಾಧಾನ, ಬಣ ರಾಜಕೀಯ ಇತ್ತು. ಈಗ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ನೇಮಕದ ಬಳಿಕ ಮತ್ತೊಂದು ರೀತಿಯ ಅಸಮಾಧಾನ ಸ್ಫೋಟಗೊಂಡಿದೆ.