ಬೆಳಗಾವಿ, (ಡಿಸೆಂಬರ್ 04): ಕರ್ನಾಟಕ ಬಿಜೆಪಿ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿದೆ. ಆದ್ರೆ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಅಸಮಾಧಾನ ಮಾತ್ರ ಇನ್ನೂ ಕಡಿಮೆಯಾಗುತ್ತಿಲ್ಲ. ವಿಪಕ್ಷ ನಾಯಕ ಅಥವಾ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕದವರಿಗೆ ನೀಡಬೇಕೆಂದು ಯತ್ನಾಳ್ ಅವರ ಆಗ್ರಹವಾಗಿದ್ದು, ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡುವವರೆಗೂ ಬಿಜೆಪಿ ಶಾಸಕಾಂಗ ಸಭೆಗೆ ಹೋಗಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಸದನದಲ್ಲಿ ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆ ಬಗ್ಗೆ ಚರ್ಚೆ ಆಗಲಿ. ದಕ್ಷಿಣ ಕರ್ನಾಟಕಕ್ಕೆ ನ್ಯಾಯ ಕೊಟ್ರು, ಆ ಭಾಗದ ನಾಯಕರಿಗೆ ನಾವು ಗುಲಾಮರಲ್ಲ. ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡುವವರೆಗೂ ಬಿಎಲ್ಪಿ(ಬಿಜೆಪಿ ಶಾಸಕಾಂಗ) ಸಭೆಗೆ ಬರಲ್ಲ ಎಂದು ಖಂಡ ತುಂಡವಾಗಿ ಹೇಳಿದರು.
ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕನ ಬದಲಾವಣೆಗೆ ಪಟ್ಟು
ಬಹಳಷ್ಟು ಅನಕೂಲ ಇದ್ದವರಿಗೆ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕನನ್ನು ಮಾಡುತ್ತಾರೆ. ರಾಜ್ಯದ ಜನರ ದೃಷ್ಟಿಯಲ್ಲಿ ನಾನು ಎಲ್ಲಾ ರೀತಿಯ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಆಗಲು ಸಮರ್ಥನಾಗಿದ್ದೇನೆ. ಉತ್ತರ ಕರ್ನಾಟಕ ಭಾಗಕ್ಕೆ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಸ್ಥಾನ ಸಿಗಲೇಬೇಕು. ಅದಕ್ಕೆ ನಾನು ಯಾರ ಮುಲಾಜಿಗೂ ಹೆದರುವುದಿಲ್ಲ . ಉತ್ತರ ಕರ್ನಾಟಕಕ್ಕೆ ಅಪಮಾನ ಮಾಡಲಾಗಿದೆ. ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ಸ್ಥಾನ ಬದಲಾಗುವವರೆಗೂ ನಾನು ಶಾಸಕಾಂಗ ಸಭೆಗೆ ಹೋಗುವುದಿಲ್ಲ ಎಂದು ಹೇಳಿದರು.
ರಾಜ್ಯಾಧ್ಯಕ್ಷ ವಿರೋಧ ಪಕ್ಷದ ನಾಯಕನ ವಿಚಾರವಾಗಿ ಟಿವಿ9 ಸ್ಪಷ್ಟ ಸರ್ವೇ ಮಾಡಿದೆ. ನಾನು ರಾಜ್ಯಾಧ್ಯಕ್ಷನಾಗುವುದಕ್ಕೆ ಎಲ್ಲಾ ರೀತಿಯ ಅರ್ಹ ಇದೆ . ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ, ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ನಮ್ಮ ಅಪ್ಪ ಮುಖ್ಯಮಂತ್ರಿಯಲ್ಲ. ನಾನು ಯಾವುದೇ ಸರ್ಕಾರಿ ಭೂಮಿ ಲೂಟಿ ಮಾಡಿಲ್ಲ. ನಂದು ಎಲ್ಲವೂ ಕುಲಂಕುಲ್ಲ ಇದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ಉತ್ತರ ಕರ್ನಾಟಕದ ಎಮ್ಎಲ್ಎಗಳು, ಎಂಪಿಗಳು ನಿಮಗೆ ಬೇಕು. ಆದರೆ ರಾಜ್ಯಾಧ್ಯಕ್ಷ ವಿರೋಧ ಪಕ್ಷದ ನಾಯಕ ಆ ಹಳೆ ಮೈಸೂರು ಬಾಗದವರು ಆಗಬೇಕು ಎಂದು ಸ್ವಪಕ್ಷದ ವಿರುದ್ಧ ಗುಡುಗಿದರು.
ಮುಖ್ಯಮಂತ್ರಿ ಹಳೆ ಮೈಸೂರು ಭಾಗ, ಉಪಮುಖ್ಯಮಂತ್ರಿಯ ಹಳೆ ಮೈಸೂರು ಭಾಗ, ವಿರೋಧ ಪಕ್ಷದ ನಾಯಕ ಹಳೆ ಮೈಸೂರು ಭಾಗ, ಬಿಜೆಪಿ ವಿರೋಧ ಪಕ್ಷದ ನಾಯಕ ಮತ್ತು ರಾಜ್ಯಾಧ್ಯಕ್ಷ ಹಳೆ ಮೈಸೂರು ಭಾಗ ಮತ್ತು ಬೆಂಗಳೂರಿನವರು. ನಾವೇನು ಉತ್ತರ ಕರ್ನಾಟಕದವರು ಗಂಟೆ ಹೊಡಿಬೇಕಾ? ನಮಗೆ ನ್ಯಾಯ ಸಿಗುವವರೆಗೂ ಯಾವುದೇ ಹೋರಾಟಕ್ಕೂ ನಾನು ಸಿದ್ಧ. ಯಾವ ಸ್ಥಾನವನ್ನು ತ್ಯಾಗವನ್ನು ಬೇಕಾದರೂ ಮಾಡುತ್ತೇನೆ ಎಂದು ಪರೋಕ್ಷವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ರೆಡಿ ಎನ್ನುವ ಅರ್ಥದಲ್ಲಿ ಹೇಳಿದರು.