ಯಲ್ಲಾಪುರ: ಜ್ಯುವೆಲ್ಲರ್ಸ್ ಅಂಗಡಿಯಿಂದ ಲಕ್ಷಾಂತರ ರೂ. ಬೆಲೆಯ ಬಂಗಾರದ ಚೂರುಗಳಿರುವ ಡಬ್ಬಿಯನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗದಗ ಜಿಲ್ಲೆಯ ಎಸ್. ಎಂ. ಕೃಷ್ಣನಗರದ ಆಶ್ರಯ ಕಾಲೋನಿಯ ನಿವಾಸಿ ಮುಜಾಹಿದ್ ಸೈಯದ್ ಹಾಗೂ ವಿಜಯಪುರ ಜಿಲ್ಲೆಯ ದರಬಾರಗಲ್ಲದ ಜಾಫರ್ ಹುಸೇನ್ ಇರಾನಿ ಬಂಧಿತ ಆರೋಪಿಗಳಾಗಿದ್ದಾರೆ.
ಜುಲೈ 25 ರಂದು ಯಲ್ಲಪುರದ ಶ್ರೀ ಮಹಾಗಣಪತಿ ಜ್ಯುವೆಲರ್ ಅಂಗಡಿಗೆ ಬಂದು ವಾಸ್ತು ಪೆಟ್ಟಗೆಯನ್ನು ಖರೀದಿಸಿದ್ದಾರೆ. ಬಳಿಕ ತಮಗೆ ಬಂಗಾರದ ಚೂರುಗಳು ಬೇಕು ಎಂದು ಅಂಗಡಿ ಮಾಲಕರಲ್ಲಿ ಕೇಳಿದ್ದಾರೆ. ಅದರಂತೆ ಬಂಗಾರದ ಚೂರುಗಳು ಇರುವ ಡಬ್ಬಿಯನ್ನು ತೆಗೆದು ಗ್ಲಾಸ್ ಕೌಂಟ್ ಮೇಲೆ ಇಟ್ಟ ಮಾಲಿಕರು ಬಳಿಕ ಅದನ್ನು ಅಲ್ಲೇ ಮರೆತು ಬೇರೆ ಕೆಲಸದಲ್ಲಿ ತೊಡಗಿದ್ದರು. ಈ ಸಂದರ್ಭವನ್ನು ಉಪಯೋಗಿಸಿದ ಕಳ್ಳರು ಸುಮಾರು 1.20 ಲಕ್ಷ ರೂ. ಬೆಲೆಯ ಬಂಗಾರದ ಚೂರುಗಳಿರುವ ಆ ಡಬ್ಬಿಯನ್ನು ಎಗರಿಸಿಕೊಂಡು ಪರಾರಿಯಾಗಿದ್ದರು.
ಇನ್ನು ಈ ಬಗ್ಗೆ ಅಂಗಡಿ ಮಾಲಕ ಪ್ರಸನ್ನ ಶೇಟ್ ಅವರು ಆಗಸ್ಟ್ 1 ರಂದು ಯಲ್ಲಾಪುರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಸ್‌ಪಿ ಡಾ. ಸುಮನ್ ಪನ್ನೇಕರ, ಹೆಚ್ಚುವರಿ ಎಸ್‌ಪಿ ಬದರಿನಾಥ, ಶಿರಸಿ ಉಪ ವಿಭಾಗದ ಡಿಎಸ್‌ಪಿ ರವಿ ನಾಯ್ಕ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.
ಈ ನಡುವೆ ಆಗಸ್ಟ್ 3 ರಂದು ಖಚಿತ ಮಾಹಿತಿಯ ಮೇರೆಗೆ ಪಿಐ ಸುರೇಶ ಯಳ್ಳೂರು ಹಾಗೂ ಪಿಎಸ್‌ಐಗಳಾದ ಅಮೀನ್‌ಸಾಬ್ ಅತ್ತಾರ್ ಹಾಗೂ ನಸೀನ್ ತಾಜ್ ಅವರ ಅವರ ತಂಡ ಯಲ್ಲಾಪುರ ತಾಲೂಕಿನ ಕಿರವತ್ತಿ ಫಾರೆಸ್ಟ್ ಚೆಕ್‌ಪೋಸ್ಟ್ ಬಳಿ ಆರೋಪಿಗಳಿಬ್ಬರನ್ನು ಬಂಧಿಸಿ ಅವರಿಂದ ಬಂಗಾರ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ಸೇರಿ ಒಟ್ಟೂ 1.53 ಲಕ್ಷ ರೂ. ಬೆಲೆಯ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಎಸ್‌ಪಿ ಡಾ. ಸುಮನ್ ಪನ್ನೇಕರ ಅವರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಬಸವರಾಜ ಹಗರಿ, ಮಹ್ಮದ ಶಫಿ, ಗಜಾನನ, ಪ್ರವೀಣ, ನಂದೀಶ, ಶೋಭಾ ನಾಯ್ಕ ಪಾಲ್ಗೊಂಡಿದ್ದರು.