ಬ್ಯಾಟ್‌ ಮೇಲೆ ಪ್ಯಾಲೆಸ್ತೀನ್ ಧ್ವಜ; ಆಝಂ ಖಾನ್​ಗೆ ಭಾರಿ ದಂಡ ವಿಧಿಸಿದ ಪಾಕ್ ಮಂಡಳಿ..!

ಕರಾಚಿಯಲ್ಲಿ ನಡೆದ ರಾಷ್ಟ್ರೀಯ ಟಿ20 ಪಂದ್ಯಾವಳಿಯ ವೇಳೆ ಐಸಿಸಿ ಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಝಂ ಖಾನ್ ಅವರಿಗೆ ಪಂದ್ಯ ಶುಲ್ಕದ 50% ದಂಡ ವಿಧಿಸಲಾಗಿದೆ. ಭಾನುವಾರ ಲಾಹೋರ್ ಬ್ಲೂಸ್ ಮತ್ತು ಕರಾಚಿ ವೈಟ್ಸ್ ನಡುವಿನ ಪಂದ್ಯದ ವೇಳೆ ಪಾಕಿಸ್ತಾನದ ಮಾಜಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಮತ್ತು ನಾಯಕ ಮೊಯಿನ್ ಖಾನ್ ಅವರ ಪುತ್ರ ಆಝಂ, ಪ್ಯಾಲೆಸ್ತೀನ್ ಧ್ವಜದ ಸ್ಟಿಕರ್​ ಇರುವ ಬ್ಯಾಟ್ ಹಿಡಿದು ಅಖಾಡಕ್ಕಿಳಿದಿದ್ದರು. ಇದು ಐಸಿಸಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಈ ಕಾರಣಕ್ಕಾಗಿ ಅವರಿಗೆ ದಂಡ ವಿಧಿಸಲಾಗಿದೆ.

ಬ್ಯಾಟ್ ಮೇಲೆ ಪ್ಯಾಲೆಸ್ತೀನ್ ಧ್ವಜ

ರಾಷ್ಟ್ರೀಯ ಟಿ20 ಪಂದ್ಯದ ವೇಳೆ ಆಝಂ ಖಾನ್ ತಮ್ಮ ಬ್ಯಾಟ್‌ ಮೇಲೆ ಪ್ಯಾಲೆಸ್ತೀನ್ ಧ್ವಜವನ್ನು ಹಾಕಿದ್ದರು. ಈ ಕಾರಣಕ್ಕಾಗಿ ಅವರಿಗೆ ಈ ದಂಡ ವಿಧಿಸಲಾಗಿದೆ. ಪ್ಯಾಲೆಸ್ತೀನ್ ಧ್ವಜವನ್ನು ಬ್ಯಾಟ್‌ನಲ್ಲಿ ಇರಿಸದಂತೆ ರೆಫರಿ ಈ ಹಿಂದೆಯೇ ಆಝಂ ಅವರಿಗೆ ಎಚ್ಚರಿಕೆ ನೀಡಿದ್ದರು. ಅದಾಗ್ಯೂ ಆಝಂ ಅದೇ ಬ್ಯಾಟನ್ನು ಬಳಸಿದಕ್ಕಾಗಿ ಶಿಕ್ಷೆಗೆ ಗುರಿಪಡಿಸಲಾಗಿದೆ.

ಈ ಹಿಂದೆಯೂ ಈ ಬ್ಯಾಟ್ ಬಳಕೆ

ಪಾಕಿಸ್ತಾನಿ ಮಾಧ್ಯಮಗಳ ಪ್ರಕಾರ, ರಾಷ್ಟ್ರೀಯ ಟಿ20 ಕಪ್‌ನ ಕೊನೆಯ ಎರಡು ಪಂದ್ಯಗಳಲ್ಲಿ ಆಝಂ ಅವರ ಬ್ಯಾಟ್‌ ಮೇಲೆ ಅದೇ ಸ್ಟಿಕ್ಕರ್ ಇತ್ತು. ಆದರೆ, ಇಂದಿನ ಪಂದ್ಯಕ್ಕೂ ಮುನ್ನ ಯಾರೂ ಅವರಿಗೆ ಎಚ್ಚರಿಕೆ ನೀಡಿರಲಿಲ್ಲ. ಐಸಿಸಿ ನಿಯಮಗಳ ಪ್ರಕಾರ ಆಟಗಾರರು ತಮ್ಮ ಉಡುಪು ಮತ್ತು ಬಳಸುವ ಸಲಕರಣೆಗಳ ಮೇಲೆ ರಾಜಕೀಯ, ಧಾರ್ಮಿಕ ಅಥವಾ ಜನಾಂಗೀಯ ಚಟುವಟಿಕೆಗಳಿಗೆ ಸಂಬಂಧಿಸಿದ ಸಂದೇಶಗಳನ್ನು ಪ್ರದರ್ಶಿಸುವಂತಿಲ್ಲ. ಆದರೆ ಆಝಂ ಅವರು ಈ ನಿಯಮವನ್ನು ಮುರಿದಿದ್ದರಿಂದಾಗಿ ದಂಡ ವಿಧಿಸಲಾಗಿದೆ.

ಆಝಂ ತಂಡಕ್ಕೆ ಸೋಲು

ಇನ್ನು ಈ ವಿವಾದದ ಹೊರತಾಗಿ ಪಂದ್ಯದ ಬಗ್ಗೆ ಮಾತನಾಡುವುದಾದರೆ.. ಈ ಪಂದ್ಯದಲ್ಲಿ ಆಝಂ ಖಾನ್ ಸಾರಥ್ಯದ ಕರಾಚಿ ತಂಡ ಸೋಲನುಭವಿಸಬೇಕಾಯಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಾಹೋರ್ ಬ್ಲೂಸ್ 8 ವಿಕೆಟ್‌ ನಷ್ಟಕ್ಕೆ 159 ರನ್ ಕಲೆಹಾಕಿತು. ತಂಡದ ಪರ ಆರಂಭಿಕ ಇಮ್ರಾನ್ ಬಟ್ 35 ಎಸೆತಗಳಲ್ಲಿ 54 ರನ್ ಸಿಡಿಸಿದರೆ, ನಾಯಕ ಹುಸೇನ್ ತಲಾತ್ 45 ರನ್​ಗಳ ಕೊಡುಗೆ ನೀಡಿದರು. ಇದಕ್ಕೆ ಉತ್ತರವಾಗಿ ಕರಾಚಿ ತಂಡ ಕೇವಲ 154 ರನ್ ಗಳಿಸಲಷ್ಟೇ ಶಕ್ತವಾಗಿ 5 ರನ್‌ಗಳಿಂದ ಸೋಲು ಕಂಡಿತು. ಅಮ್ಮದ್ ಖಾನ್ 45 ರನ್ ಕೊಡುಗೆ ನೀಡಿದರೆ, ಆಝಂ ಖಾನ್ 35 ರನ್ ಬಾರಿಸಿದರು.