ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 200+ ರನ್ಗಳ ಟಾರ್ಗೆಟ್ ಬೆನ್ನಟ್ಟಿ ರೋಚಕ ಜಯ ಸಾಧಿಸಿರುವ ಭಾರತ, ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಇದೀಗ ಉಭಯ ತಂಡಗಳು ದ್ವಿತೀಯ ಟಿ20ಗೆ ಸಜ್ಜಾಗುತ್ತಿದೆ. ಎರಡನೇ ಪಂದ್ಯ ನ. 26 ಭಾನುವಾರದಂದು ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮೊದಲ ಪಂದ್ಯದಲ್ಲಿ ಜೋಶ್ ಇಂಗ್ಲಿಸ್ ಅವರ ಅಮೋಘ ಶತಕದ ಬಲದಿಂದ ಆಸ್ಟ್ರೇಲಿಯ 20 ಓವರ್‌ಗಳಲ್ಲಿ 208/3 ರನ್ನುಗಳನ್ನು ಕಲೆಹಾಕಿತು. ಇದಕ್ಕೆ ಉತ್ತರವಾಗಿ, ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅದ್ಭುತ ಇನ್ನಿಂಗ್ಸ್ ಆಡಿದರು, 42 ಎಸೆತಗಳಲ್ಲಿ 80 ರನ್ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.
ಎರಡನೇ T20I ಪಂದ್ಯಕ್ಕಾಗಿ ಉಭಯ ತಂಡಗಳು ಈಗಾಗಲೇ ತಿರುವನಂತಪುರಂಗೆ ಬಂದಿದೆ. ಆದರೆ, ಈ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ದಟ್ಟವಾಗಿದೆ. ಕಳೆದ ಕೆಲವು ದಿನಗಳಿಂದ ತಿರುವನಂತಪುರಂನಲ್ಲಿ ಜೋರಾಗಿ ಮಳೆಯಾಗುತ್ತಿದೆ. ಅಕ್ಯುವೆದರ್ ಪ್ರಕಾರ , ತಿರುವನಂತಪುರಂನಲ್ಲಿ ನವೆಂಬರ್ 26 ರಂದು 25 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಗ್ರೀನ್‌ಫೀಲ್ಡ್ ಇಂಟರ್‌ನ್ಯಾಶನಲ್ ಸ್ಟೇಡಿಯಂನ ವಿಕೆಟ್‌ಗಳು ದೊಡ್ಡ ಸ್ಕೋರ್‌ಗಳಿಗೆ ಹೆಸರಾಗಿಲ್ಲ. ಏಕೆಂದರೆ ಇಲ್ಲಿ ನಡೆದ ನಾಲ್ಕು ಅಂತರರಾಷ್ಟ್ರೀಯ ಟಿ20 ಕೂಡ ಕಡಿಮೆ ಸ್ಕೋರಿಂಗ್ ಪಂದ್ಯಗಳಾಗಿವೆ. ಸರಾಸರಿ ಸ್ಕೋರ್ 114 ಆಗಿದೆ. ಪಿಚ್ ಬೌಲರ್‌ಗಳಿಗೆ, ವಿಶೇಷವಾಗಿ ಸ್ಪಿನ್ ಬೌಲರ್‌ಗಳಿಗೆ ಅನುಕೂಲಕರವಾಗಿರುತ್ತದೆ.
ಇಲ್ಲಿನ ಪಿಚ್‌ನ ತೇವಾಂಶವು ವೇಗದ ಬೌಲರ್‌ಗಳಿಗೆ ಕೂಡ ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಬೌಲರ್‌ಗಳಿಗೆ ಅನುಕೂಲವಾಗುವ ಈ ಪಿಚ್ನಲ್ಲಿ ಅಂಕಿಅಂಶಗಳನ್ನು ಪರಿಗಣಿಸಿದರೆ, ಟಾಸ್ ಗೆದ್ದ ತಂಡವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವ ಸಾಧ್ಯತೆಯಿದೆ.
ಭಾರತ vs ಆಸ್ಟ್ರೇಲಿಯಾ ಎರಡನೇ ಟಿ20 ಪಂದ್ಯವನ್ನು JioCinema ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್‌ಸ್ಟ್ರೀಮ್ ಮಾಡಲಾಗುತ್ತದೆ. ಅಭಿಮಾನಿಗಳು Sports18 ನೆಟ್‌ವರ್ಕ್ ಮೂಲಕ ಟಿವಿಯಲ್ಲಿ ವೀಕ್ಷಿಸಬಹುದು.
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಖೇಶ್ ಕುಮಾರ್.