ಡಬ್ಲ್ಯುಪಿಎಲ್ ಹರಾಜಿಗೆ ದಿನಾಂಕ ನಿಗದಿ; ಪರ್ಸ್​ ಗಾತ್ರದಲ್ಲೂ ಹೆಚ್ಚಳ

ಮೊದಲ ಆವೃತ್ತಿಯ ಅದ್ಭುತ ಯಶಸ್ಸಿನ ಬಳಿಕ ಬಿಸಿಸಿಐ ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಸೀಸನ್ ಅಂದರೆ ಡಬ್ಲ್ಯುಪಿಎಲ್ 2024 ರ ಹರಾಜಿಗೆ ದಿನಾಂಕವನ್ನು ನಿಗದಿಪಡಿಸಿದೆ. ಡಿಸೆಂಬರ್ 9 ರಂದು ಮುಂಬೈನಲ್ಲಿ ಹರಾಜು ನಡೆಸಲು ತೀರ್ಮಾನಿಸಲಾಗಿದೆ. ಇದರೊಂದಿಗೆ ಪ್ರತಿಯೊಂದು ಫ್ರಾಂಚೈಸಿಯ ಪರ್ಸ್​ ಗಾತ್ರವನ್ನು ಹೆಚ್ಚಿಸಲು ತೀರ್ಮಾನಿಸಿದೆ. ಅದರಂತೆ ಪ್ರತಿಯೊಂದು ಫ್ರಾಂಚೈಸಿಯ ಸಂಬಳದ ಗಾತ್ರವನ್ನು 13.5 ಕೋಟಿ ರೂ. ನಿಗದಿಪಡಿಸಲಾಗಿದೆ. ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ 2024 ರ ಫೆಬ್ರವರಿ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಈ ವರ್ಷದ ಮಹಿಳಾ ಪ್ರೀಮಿಯರ್ ಲೀಗ್ 5 ತಂಡಗಳೊಂದಿಗೆ ಮುಂಬೈ ಅಥವಾ ಬೆಂಗಳೂರಿನಲ್ಲಿ ನಡೆಯಲಿದೆ.

ಅಧಿಕ ಹಣ ಗುಜರಾತ್ ಬಳಿ

ಇನ್ನು ಹರಾಜಿಗೂ ಮುನ್ನ ಯಾವ ತಂಡದ ಬಳಿ ಅಧಿಕ ಹಣವಿದೆ ಎಂಬುದನ್ನು ನೋಡುವುದಾದರೆ ಗುಜರಾತ್ ಜೈಂಟ್ಸ್ ತಂಡ ಹೆಚ್ಚು ಹಣ ಉಳಿಸಿಕೊಂಡಿದೆ. ಸದ್ಯ ತಂಡದ ಬಳಿ 5.95 ಕೋಟಿ ರೂ. ಹಣವಿದೆ. ಹರಾಜಿಗೂ ಮುನ್ನ ಈ ತಂಡ ಹಲವು ಆಟಗಾರ್ತಿಯರನ್ನು ತಂಡದಿಂದ ಕೈಬಿಟ್ಟಿರುವುದರಿಂದ ತಂಡಕ್ಕೆ ಇನ್ನೂ 10 ಆಟಗಾರ್ತಿಯರು ಬೇಕಾಗಿದ್ದಾರೆ. ಈ ತಂಡದ ನಂತರ ಕಳೆದ ಆವೃತ್ತಿಯ ರನ್ನರ್ ಅಪ್ ಯುಪಿ ವಾರಿಯರ್ ಬಳಿ 4 ಕೋಟಿ ರೂ. ಹಣ ಬಾಕಿ ಉಳಿದಿದೆ.

ಬೆಂಗಳೂರು ಬಳಿ ಎಷ್ಟು ಹಣವಿದೆ?

ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ ಬೆಂಗಳೂರು ಬಳಿ 3.35 ಕೋಟಿ ರೂ. ಹಣವಿದ್ದರೆ, ತಂಡದಲ್ಲಿ 7 ಜಾಗಗಳು ಖಾಲಿ ಉಳಿದಿವೆ. ಹಾಗೆಯೇ ಹಾಲಿ ಚಾಂಪಿಯನ್ ಮುಂಬೈ ಬಳಿ 2.1 ಕೋಟಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಳಿ 2.25 ಕೋಟಿ ರೂ. ಹಣವಿದೆ. ಮುಂಬೈ ತಂಡದಲ್ಲಿ 5 ಸ್ಥಾನಗಳು ಖಾಲಿ ಇದ್ದರೆ, ದೆಹಲಿ ತಂಡ 3 ಸ್ಥಾನಗಳನ್ನು ಭರ್ತಿ ಮಾಡಬೇಕಿದೆ.

ಒಟ್ಟು ಎಷ್ಟು ಆಟಗಾರ್ತಿಯರಿದ್ದಾರೆ?

ಐದು ಫ್ರಾಂಚೈಸಿಗಳಾದ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ 21 ವಿದೇಶಿ ಆಟಗಾರ್ತಿಯರು ಸೇರಿದಂತೆ 60 ಕ್ರಿಕೆಟಿಗರನ್ನು ಹರಾಜಿಗೆ ಮುಂಚಿತವಾಗಿ ಉಳಿಸಿಕೊಂಡಿವೆ. ಉಳಿದಂತೆ ಎಲ್ಲಾ ತಂಡಗಳು ಒಟ್ಟು 29 ಆಟಗಾರರ್ತಿಯರನ್ನು ಒಪ್ಪಂದದಿಂದ ಬಿಡುಗಡೆ ಮಾಡಲಾಗಿದೆ.