ಆ ಠಾಣಾ ವ್ಯಾಪ್ತಿಯಲ್ಲಿ ಆರು ತಿಂಗಳಲ್ಲೆ ಸರಣಿಯಲ್ಲಿ 20 ಕ್ಕೂ ಅಧಿಕ ಮನೆಗಳಲ್ಲಿ ಕಳ್ಳತನವಾಗಿದ್ದು ಪೊಲೀಸರು ಇದ್ಯಾವೋದು ದೊಡ್ಡ ಗ್ಯಾಂಗ್ ಕೃತ್ಯ ಅಂತ ಬೇಟೆಗೆ ಇಳಿದಿದ್ರು. ಆದ್ರೆ ದೊಡ್ಡ ಗ್ಯಾಂಗ್ ಖೆಡ್ಡಾಗೆ ಕೆಡವೋಕ್ಕೆ ಅಂತ ಹೋದ ಪೊಲೀಸರಿಗೆ ಒಬ್ಬಂಟಿ ಕಳ್ಳ ಸೆರೆ ಸಿಕ್ಕಿದ್ದು ಒಂಟಿಕಳ್ಳನಿಂದ ಏನಾಗುತ್ತೆ ಅಂದುಕೊಂಡವರಿಗೆ ಕಳ್ಳ ಸಖತ್ ಶಾಕ್ ನೀಡಿದ್ದಾನೆ.
ಒಂದಲ್ಲ ಎರಡಲ್ಲ ಹತ್ತಾರು ತರಹದ ಚಿನ್ನಾಭರಣಗಳು ಹತ್ತು ಗ್ರಾಂ ಅಲ್ಲ 20 ಗ್ರಾಂ ಅಲ್ಲ ಬರೋಬ್ಬರಿ 600 ಗ್ರಾಂ ಚಿನ್ನಾಭರಣ. ತರಹೇವಾರಿ ಆಭರಣಗಳನೆಲ್ಲ ಪೊಲೀಸರು ಠಾಣೆ ಮುಂದಿಟ್ಟು ಡಿಸ್ ಪ್ಲೇ ಮಾಡ್ತಿದ್ರೆ ನೋಡಿದವರು ಯಾವುದೋ ದೊಡ್ಡ ಗ್ಯಾಂಗ್ ತಗಲಾಕ್ಕೊಂಡಿದೆ ಅಂತಲೆ ಅಂದುಕೊಂಡಿದ್ರು. ಆದ್ರೆ ಈ ಖದೀಮನನ್ನ ನೋಡಿ ಸ್ವತಃ ಚಿನ್ನಾಭರಣಗಳನ್ನ ಕಳೆದುಕೊಂಡವರು ಸಹ ಒಂದು ಕ್ಷಣ ಬೆರಗಾಗಿದ್ದಾರೆ. ಹೌದು ಅಂದಹಾಗೆ ಇಷ್ಟೆಲ್ಲ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದು ಇದೇ ಒಂಟಿ ಕಳ್ಳ ಇಮ್ತಿಯಾಜ್ ಅಹ್ಮದ್ ಅಲಿಯಾಸ್ ಬಾಬು.
ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿ ಮತ್ತು ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳಿಂದ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗಿದ್ವು. ಆರು ತಿಂಗಳ ಅವಧಿಯಲ್ಲಿ 15 ಕ್ಕೂ ಅಧಿಕ ಮನೆಗಳ ಡೋರ್ ಮುರಿದು ಒಳ ನುಗಿದ್ದ ಖದೀಮರು ಮನೆಯಲ್ಲಿದ್ದ ಬಿರುವಾಗಳಲ್ಲಿ ಚಿನ್ನಾಭರಣ ಹಾಗೂ ನಗದು ಹಣವನ್ನ ದೋಚಿ ಎಸ್ಕೇಪ್ ಆಗಿದ್ದರು..
ಅಲ್ಲದೆ ಬೆಳಗ್ಗೆ- ಸಂಜೆ ಉದ್ಯೋಗ ಹಾಗೂ ಊರುಗಳಿಗೆ ಹೋಗಲು ಜನ ಹೆದರುವಂತಾಗಿದ್ದು ಪೊಲೀಸರಿಗೂ ತಲೆ ನೋವಾಗಿತ್ತು. ಹೀಗಾಗಿ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ತಿರುಮಲಶೆಟ್ಟಿಹಳ್ಳಿ ಪೊಲೀಸರು ಯಾವುದೋ ಹಳೆಯ ಕಳ್ಳತನ ಗ್ಯಾಂಗ್ ಈ ಸರಣಿ ಕೃತ್ಯಗಳನ್ನ ಮಾಡ್ತಿರಬೇಕು ಅಂತ ಬೇಧಿಸಲು ಬೆನ್ನತ್ತಿದ್ದು ತನಿಖೆ ವೇಳೆ ಪೊಲೀಸರು ಒಂದು ಕ್ಷಣ ಬೆರಗಾಗಿದ್ದಾರೆ. ಹೌದು ಯಾಕಂದ್ರೆ ಗ್ಯಾಂಗ್ ಬದಲಿಗೆ ಇದೇ ಒಬ್ಬಂಟಿ ಕಳ್ಳ ಇಮ್ತಿಯಾಜ್ ಅಹ್ಮದ್ ಸರಣಿ ಮನೆಗಳ್ಳತನ ಮಾಡಿ ತಗಲಾಕ್ಕೊಂಡಿದ್ದಾನೆ.
ಪೊಲೀಸರಿಗೆ ಸೆರೆ ಸಿಕ್ಕ ಆರೋಪಿ ಇಮ್ತಿಯಾಜ್ ಅಹ್ಮದ್ ಮೂಲತಃ ಡಿಜೆ ಹಳ್ಳಿಯವನಾಗಿದ್ದು ಕಳೆದ ಜನವರಿಯಲ್ಲಿ ಮನೆಗಳ್ಳತನ ಕೇಸ್ ನಲ್ಲಿ ಜೈಲಿಗೆ ಹೋಗಿ ಬೇಲ್ ಮೇಲೆ ಹೊರಗಡೆ ಬಂದಿದ್ದ. ಆದ್ರೆ ಬೇಲ್ ಮೇಲೆ ಹೊರಗಡೆ ಬಂದ ನಂತರವೂ ಕಳ್ಳತನ ಕೃತ್ಯವನ್ನ ಮುಂದುವರೆಸಿದ್ದು ತಿರುಮಲಶೆಟ್ಟಿಹಳ್ಳಿ ಬಳಿ ರೂಂ ಒಂದನ್ನ ಮಾಡಿಕೊಂಡಿದ್ನಂತೆ.
ಅಲ್ಲದೆ ಸಂಜೆ ವೇಳೆ ಮೊಬೈಲ್ ಬಳಸದೆ ಜನನಿಬಿಡ ಪ್ರದೇಶದ ಮನೆಗಳತ್ತ ಬರ್ತಿದ್ದ ಖದೀಮ ಲಾಕ್ ಮಾಡಿರುವ ಮನೆಗಳನ್ನ ಗುರುತಿಸಿ ರಾತ್ರಿ ಸ್ಕೆಚ್ ಹಾಕಿ ಚಿನ್ನಾಭರಣ ದೋಚುತ್ತಿದ್ದ. ಜೊತೆಗೆ ದೋಚಿದ ಚಿನ್ನಾಭರಣಗಳನ್ನ ನಗೀನಾ ತಾಜ್ ಎಂಬುವವಳಿಗೆ ನೀಡ್ತಿದ್ದ. ಅವಳು ಅದನ್ನೆಲ್ಲ ಮಾರಾಟ ಮಾಡಿ ಹಣ ನೀಡ್ತಿದ್ಲಂತೆ. ಅಲ್ಲದೆ ಈ ರೀತಿ ಬಂದ ಹಣದಿಂದ ಆರೋಪಿ ಕುದುರೆ ರೇಸ್ ಹಾಗೂ ಸಿಕ್ಕ ಸಿಕ್ಕ ಶೋಕಿ ಮಾಡುತ್ತಾ ಜೀವನ ಸಾಗಿಸುತ್ತಿದ್ದ. ಇನ್ನು ಬಂಧಿತ ಆರೋಪಿಯಿಂದ ಪೊಲೀಸರು 15 ಕಳ್ಳತನ ಪ್ರಕರಣಗಳನ್ನ ಬೇಧಿಸಿದ್ದು 38 ಲಕ್ಷ ರೂಪಾಯಿ ಮೌಲ್ಯದ 629 ಗ್ರಾಂ ತೂಕದ ಚಿನ್ನಾಭರಣಗಳನ್ನ ವಶಪಡಿಸಿಕೊಂಡಿದ್ದಾರೆ ಎಂದು ಮಲ್ಲಿಕಾರ್ಜುನ ಬಾಲದಂಡಿ, ಎಸ್ಪಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಹಿತಿ ನೀಡಿದ್ದಾರೆ.
ಒಟ್ಟಾರೆ ಸರಣಿ ಮನೆಗಳ್ಳತನ ಪ್ರಕರಣಗಳಿಂದ ರಾತ್ರಿ ವೇಳೆ ಮನೆಗೆ ಬೀಗ ಹಾಕಿ ಹೊರಗಡೆ ಹೋಗುವುದಕ್ಕೂ ಅಂಜುತ್ತಿದ್ದ ತಿರುಮಲಶೆಟ್ಟಿಹಳ್ಳಿ ಠಾಣಾ ವ್ಯಾಪ್ತಿಯ ಗ್ರಾಮಸ್ಥರು ಇದೀಗ ಆರೋಪಿಯ ಬಂಧನದಿಂದ ನಿಟ್ಟುಸಿರು ಬಿಟ್ಟಿರುವುದಂತೂ ಸುಳ್ಳಲ್ಲ.