ಮುಂಬರಲಿರುವ ರಾಜಸ್ಥಾನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಪ್ರಣಾಳಿಕೆಯನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಿಡುಗಡೆ ಮಾಡಿದ್ದಾರೆ. ಜತೆಗೆ ಜಾತಿ ಗಣತಿ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು. ಪ್ರಣಾಳಿಕೆಯಲ್ಲಿ ರೈತರು, ಯುವಕರು, ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಪ್ರಣಾಳಿಕೆ ಬಿಡುಗಡೆ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಸಾರ, ಸಿಪಿ ಜೋಶಿ, ಸಚಿನ್ ಪೈಲಟ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಈ ವೇಳೆ ಕಾಂಗ್ರೆಸ್ ಬಿಜೆಪಿ ಮತ್ತು ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತ್ತು .
ರಾಜಸ್ಥಾನದಲ್ಲಿಯೂ ಪಕ್ಷ ಮತ್ತೆ ಗೆಲುವಿನ ಬಗ್ಗೆ ಮಾತನಾಡಿದೆ. ನವೆಂಬರ್ 25ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಹೊರಬರಲಿದೆ.
ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಅಂಶಗಳು
- ಸ್ವಾಮಿನಾಥನ್ ಸಮಿತಿಯ ಶಿಫಾರಸ್ಸಿನಂತೆ ರೈತರಿಗೆ ಎಂಎಸ್‌ಪಿ ಕಾನೂನು ತರಲಾಗುವುದು.
- ಚಿರಂಜೀವಿ ವಿಮೆ ಮೊತ್ತವನ್ನು 25 ಲಕ್ಷದಿಂದ 50 ಲಕ್ಷಕ್ಕೆ ಹೆಚ್ಚಿಸಲಾಗುವುದು.
- ನಾಲ್ಕು ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು. 10 ಲಕ್ಷ ಯುವಕರಿಗೆ ಉದ್ಯೋಗ ನೀಡಲಾಗುವುದು.
- ಪಂಚಾಯತ್ ಮಟ್ಟದಲ್ಲಿ ಸರ್ಕಾರಿ ಉದ್ಯೋಗಗಳ ಹೊಸ ಕೇಡರ್ ಅನ್ನು ರಚಿಸಲಾಗುವುದು.
- ಸದ್ಯ 500 ರೂ.ಗೆ ಸಿಗುವ ಗ್ಯಾಸ್ ಸಿಲಿಂಡರ್ ಬೆಲೆ 400 ರೂ.
- ರಾಜ್ಯದಲ್ಲಿ ಆರ್‌ಟಿಇ ಕಾನೂನು ತರುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ 12ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಲಾಗುವುದು.
- MNREGA ಮತ್ತು ಇಂದಿರಾ ಗಾಂಧಿ ನಗರ ಉದ್ಯೋಗವನ್ನು 125 ರಿಂದ 150 ದಿನಗಳಿಗೆ ಹೆಚ್ಚಿಸಲಾಗುವುದು