ಕೊನೆಗೂ ಸಿಕ್ತು ಮೋದಿ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್​ಗೆ ಬಂದ ವಿಡಿಯೋ: ಇಲ್ಲಿದೆ ನೋಡಿ

ಭಾನುವಾರ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ 2023 ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿನ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ಟೀಮ್ ಇಂಡಿಯಾ ಡ್ರೆಸ್ಸಿಂಗ್ ಕೋಣೆಗೆ ಭೇಟಿ ನೀಡಿದ ಫೋಟೋ ಸೋಮವಾರ ಸಖತ್ ವೈರಲ್ ಆಗಿತ್ತು. ಇದೀಗ ಮೋದಿ ಅವರು ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರ ಜೊತೆ ಮಾತುಕತೆ ನಡೆಸುತ್ತಿರುವ ವಿಡಿಯೋ ಬಿಡುಗಡೆ ಆಗಿದ್ದು, ಇದುಕೂಡ ಎಲ್ಲೆಡೆ ಹರಿದಾಡುತ್ತಿದೆ.

ಸೋಮವಾರ, ವೇಗಿ ಮೊಹಮ್ಮದ್ ಶಮಿ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಭಾರತದ ಡ್ರೆಸ್ಸಿಂಗ್ ಕೋಣೆಯಲ್ಲಿ ಪ್ರಧಾನಿ ಮೋದಿಯವರ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದರು. ಸೋಲಿನ ನಂತರ ಅವರು ಆಟಗಾರರನ್ನು ಹೇಗೆ ಸಮಾಧಾನ ಪಡಿಸಿದರು ಎಂಬುದನ್ನು ಹೇಳಿದ್ದರು. ಇದೀಗ ಮೋದಿ ಭೇಟಿಯ ಸಂಪೂರ್ಣ ವಿಡಿಯೋ ರಿಲೀಸ್ ಆಗಿದೆ. ಇಲ್ಲಿ ಮೋದಿ ಅವರು ಕೊಹ್ಲಿ-ರೋಹಿತ್ ಕೈಹಿಡಿದು ನೊಂದ ಮನಕ್ಕೆ ಸಾಂತ್ವಾನ ಹೇಳಿದ್ದಾರೆ.

ಫೈನಲ್ ಪಂದ್ಯದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಆಟಗಾರರ ಡ್ರೆಸ್ಸಿಂಗ್ ದಿಢೀರ್ ಕೋಣೆಗೆ ಭೇಟಿ ನೀಡಿದ್ದರು. ಟೂರ್ನಿಯಲ್ಲಿ ತಂಡದ ಪ್ರದರ್ಶನದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಬೌಲರ್ ಶಮಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ನಂತರ ಎಕ್ಸ್ ನಲ್ಲಿ ಭಾವನಾತ್ಮಕ ಟ್ವೀಟ್ ಹಂಚಿಕೊಂಡಿದ್ದಾರೆ.

”ದುರದೃಷ್ಟವಶಾತ್ ಭಾನುವಾರ ನಮ್ಮ ದಿನವಾಗಿರಲಿಲ್ಲ. ಟೂರ್ನಿಯುದ್ದಕ್ಕೂ ನಮ್ಮ ತಂಡ ಮತ್ತು ನನ್ನನ್ನು ಬೆಂಬಲಿಸಿದ್ದಕ್ಕಾಗಿ ಎಲ್ಲಾ ಭಾರತೀಯರಿಗೆ ಧನ್ಯವಾದ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಧನ್ಯವಾದ ತಿಳಿಸುತ್ತೇನೆ. ಅವರು ನಮ್ಮ ಡ್ರೆಸ್ಸಿಂಗ್ ರೂಮಿಗೆ ಬಂದು ತಮ್ಮ ಮಾತುಗಳಿಂದ ನಮಗೆ ಸ್ಫೂರ್ತಿ ತುಂಬಿದರು. ನಾವು ಖಂಡಿತವಾಗಿಯೂ ಕಮ್​ಬ್ಯಾಕ್ ಮಾಡುತ್ತೇವೆ,” ಎಂದು ಶಮಿ ಬರೆದಿದ್ದಾರೆ.

ಆಟಗಾರರನ್ನು ಭೇಟಿ ಮಾಡಿದ ನಂತರ ಪ್ರಧಾನಿ ಮೋದಿ ಕೂಡ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ. ”ಆತ್ಮೀಯ ಟೀಮ್ ಇಂಡಿಯಾ.. ಈ ವಿಶ್ವಕಪ್‌ನಲ್ಲಿ ನಿಮ್ಮ ಪ್ರತಿಭೆ ಮತ್ತು ಸಂಕಲ್ಪ ಗಮನಾರ್ಹವಾಗಿದೆ. ನೀವು ತುಂಬಾ ಉತ್ಸಾಹದಿಂದ ಆಡಿದ್ದೀರಿ. ನಿಮ್ಮ ಆಟದ ಬಗ್ಗೆ ದೇಶಕ್ಕೆ ಹೆಮ್ಮೆ ತಂದರು. ನಾವು ಇಂದು ಮಾತ್ರವಲ್ಲ… ಸದಾ ನಿಮ್ಮೊಂದಿಗೆ ಇರುತ್ತೇವೆ,” ಎಂದು ಟ್ವೀಟ್ ಮಾಡಿದ್ದಾರೆ.