ಕೋಚ್ ಆಗಿ ಅವರನ್ನು ಹೀಗೆ ನೋಡಲಾಗುತ್ತಿಲ್ಲ’; ಸೋಲಿನ ನಂತರ ದ್ರಾವಿಡ್ ಹೇಳಿದ್ದೇನು?

ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಆಗುವ ಭಾರತದ ಕನಸು ಮತ್ತೊಮ್ಮೆ ಕನಸಾಗಿಯೇ ಉಳಿದಿದೆ. ಆಸ್ಟ್ರೇಲಿಯಾ ತಂಡ ಭಾರತಕ್ಕೆ ತವರಿನಲ್ಲಿ 6 ವಿಕೆಟ್‌ಗಳ ಸೋಲಿನ ಶಾಕ್ ನೀಡಿ ಆರನೇ ಬಾರಿಗೆ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ 2023 ರ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು 240 ರನ್‌ಗಳಿಗೆ ಆಲೌಟ್ ಮಾಡಿದ ಕಾಂಗರೂ ಪಡೆ, ಟ್ರಾವಿಸ್ ಹೆಡ್ ಅವರ ಶತಕದ ಬಲದಿಂದ 43 ಓವರ್‌ಗಳಲ್ಲಿಯೇ ಗುರಿ ತಲುಪಿತು. ಈ ಸೋಲಿನ ನಂತರ ಮಾತನಾಡಿದ ಟೀಂ ಇಂಡಿಯಾದ ಹಾಲಿ ಕೋಚ್ ರಾಹುಲ್ ದ್ರಾವಿಡ್ ತಂಡದ ಸೋಲಿನ ಬಗ್ಗೆ ಹಾಗೂ ತಂಡದಲ್ಲಿ ತಮ್ಮ ಸ್ಥಾನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಸೋಲಿನ ನಂತರದ್ರಾವಿಡ್ ಹೇಳಿದ್ದೇನು?

ಈ ಪಿಚ್​ನಲ್ಲಿ ಟೀಂ ಇಂಡಿಯಾ 280 ರಿಂದ 290 ರನ್ ಗಳಿಸಿದ್ದರೆ ಚೆನ್ನಾಗಿತ್ತು ಎಂದು ಸೋಲಿನ ಬಳಿಕ ಮಾತನಾಡಿದ ರಾಹುಲ್ ದ್ರಾವಿಡ್ ಹೇಳಿದ್ದಾರೆ. ನಾವು ಅಂದುಕೊಂಡಿದ್ದಕ್ಕಿಂತ 30 ರಿಂದ 40 ರನ್​ಗಳು ಕಡಿಮೆಯಾದವು ಎಂದರು. ವಿಶ್ವಕಪ್‌ನ ಮುನ್ನಾದಿನವೂ ಪಿಚ್‌ನ ಬಗ್ಗೆ ಹೆಚ್ಚು ಚರ್ಚೆ ನಡೆದಿತ್ತು. ಆಗ ರಾಹುಲ್, ಮಂಜು ಪಿಚ್ ಮೇಲೆ ಯಾವುದೇ ವಿಶೇಷ ಪರಿಣಾಮ ಬೀರಿಲ್ಲ ಎಂದು ಹೇಳಿದರು. ಇದಲ್ಲದೆ, ವಿಕೆಟ್ ಬಿದ್ದ ತಕ್ಷಣ ತಂತ್ರವನ್ನು ಬದಲಾಯಿಸಬೇಕಾಗುತ್ತದೆ ಎಂದು ಕೋಚ್ ದ್ರಾವಿಡ್ ಹೇಳಿದ್ದರು. ನಾವು ವೇಗವಾಗಿ ಆರಂಭಿಸಿ 10 ಓವರ್‌ಗಳಲ್ಲಿ 80ಕ್ಕೂ ಹೆಚ್ಚು ರನ್ ಗಳಿಸಿದೆವು. ಆದರೆ ನಂತರ ಪರಿಸ್ಥಿತಿಗೆ ಅನುಗುಣವಾಗಿ ತಂತ್ರಗಳನ್ನು ಬದಲಾಯಿಸಬೇಕಾಗಿತ್ತು. ನಾವು ಆಕ್ರಮಣಕಾರಿ ಆಟವಾಡಲು ಯೋಚಿಸಿದಾಗ, ವಿಕೆಟ್​ಗಳ ಪತನವಾಯಿತು. ಇದು ನಮಗೆ ಹಿನ್ನಡೆಯನ್ನುಂಟು ಮಾಡಿತು ಎಂದರು.

ಹುಡುಗರು ನಿರಾಶೆಗೊಂಡಿದ್ದಾರೆ

ಫೈನಲ್ ಸೋಲಿನ ಬಳಿಕ ಆಟಗಾರರ ಮನಸ್ಥಿತಿಯ ಬಗ್ಗೆ ಮಾತನಾಡಿದ ದ್ರಾವಿಡ್, ಹುಡುಗರು ತುಂಬ ನಿರಾಶೆಗೊಂಡಿದ್ದಾರೆ. ಇಡೀ ಡ್ರೆಸ್ಸಿಂಗ್ ಕೋಣೆಯೇ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ತರಬೇತುದಾರನ್ನಾಗಿ ಅವರನ್ನು ಈ ಸ್ಥಿತಿಯಲ್ಲಿ ನೋಡುವುದು ನನಗೆ ಕಷ್ಟಕರವಾಗಿತ್ತು. ಅವರ ಜೊತೆ ತುಂಬಾ ಸಮಯ ಕಳೆದಿರುವ ನಾನು ಅವರ ಬಗ್ಗೆ ವೈಯಕ್ತಿಕವಾಗಿ ತಿಳಿದಿದ್ದೇನೆ. ಹೀಗಾಗಿ ಅವರನ್ನು ಈ ಸ್ಥಿತಿಯಲ್ಲಿ ನೋಡುವುದು ಕಠಿಣವಾಗಿತ್ತು ಎಂದಿದ್ದಾರೆ.

ದ್ರಾವಿಡ್‌ ಕೋಚ್‌ ಅವಧಿ ಪೂರ್ಣಗೊಳ್ಳುವುದೇ?

ದ್ರಾವಿಡ್ 2021 ರಲ್ಲಿ ಟೀಂ ಇಂಡಿಯಾದ ಕೋಚ್ ಹುದ್ದೆಗೇರಿದ್ದರು. ಆದರೆ, ಈ ಸೋಲಿನ ಬಳಿಕ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್ ಅವಧಿಯೂ ಪೂರ್ಣಗೊಳ್ಳುವುದೇ? ಎಂಬ ಪ್ರಶ್ನೆಗಳೂ ಎದ್ದಿವೆ. ಭಾರತ ತಂಡದೊಂದಿಗಿನ ರಾಹುಲ್ ದ್ರಾವಿಡ್ ಅವರ ಒಪ್ಪಂದವು ವಿಶ್ವಕಪ್ 2023 ರ ಫೈನಲ್‌ನೊಂದಿಗೆ ಮುಕ್ತಾಯಗೊಂಡಿದೆ.ಆದರೆ ಇದೀಗ ಟೀಂ ಇಂಡಿಯಾದಲ್ಲಿ ದ್ರಾವಿಡ್ ಭವಿಷ್ಯ ಏನಾಗಲಿದೆ ಎಂದು ಅವರೇ ಉತ್ತರಿಸಿದ್ದಾರೆ.

ಟಿ20 ವಿಶ್ವಕಪ್​ವರೆಗೆ ದ್ರಾವಿಡ್ ಕೋಚ್ ಆಗಿ ಇರುತ್ತಾರಾ?

ಭಾರತ ತಂಡವು ಮುಂದಿನ ವರ್ಷ ಜೂನ್‌ನಲ್ಲಿ ಟಿ20 ವಿಶ್ವಕಪ್ ಆಡಲಿದೆ ಮತ್ತು ಈ ಟೂರ್ನಿಯವರೆಗೂ ಟೀಂ ಇಂಡಿಯಾದ ಕೋಚ್ ಆಗಿರುತ್ತೀರಾ ಎಂದು ದ್ರಾವಿಡ್ ಅವರನ್ನು ಕೇಳಿದಕ್ಕೆ ಉತ್ತರಿಸಿದ ದ್ರಾವಿಡ್, ‘ನಾನು ಅದರ ಬಗ್ಗೆ ಇನ್ನೂ ಯೋಚಿಸಿಲ್ಲ. ನನ್ನ ಸಂಪೂರ್ಣ ಗಮನ ಈ ಟೂರ್ನಿಯ ಮೇಲಿತ್ತು. ‘ನಾನೂ ಪಂದ್ಯ ಮುಗಿದ ತಕ್ಷಣ ಇಲ್ಲಿಗೆ ಬಂದೆ, ಅದರ ಬಗ್ಗೆ ಹೆಚ್ಚು ಯೋಚಿಸಿಲ್ಲ, ಸ್ವಲ್ಪ ಸಮಯ ಸಿಕ್ಕಾಗ ಆಲೋಚಿಸುತ್ತೇನೆ ಎಂದರು.