ತಿರುಪತಿ, ನವೆಂಬರ್ 20: ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸೋಲು ಎಲ್ಲರಲ್ಲೂ ನಿರಾಸೆ ಮೂಡಿಸಿದೆ. ಇದರಿಂದ ಕೋಟಿ ಕೋಟಿ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. ಭಾನುವಾರ ನಡೆದ ಪಂದ್ಯವನ್ನು ಕೋಟ್ಯಂತರ ವೀಕ್ಷಕರು ವೀಕ್ಷಿಸಿದರು. ಲಕ್ಷಾಂತರ ಜನರು ಕ್ರೀಡಾಂಗಣದಲ್ಲಿ ನೇರಪ್ರಸಾರ ವೀಕ್ಷಿಸಿದರು. ಆದರೆ ಭಾರೀ ನಿರೀಕ್ಷೆಯೊಂದಿಗೆ ಅಖಾಡಕ್ಕೆ ಬಂದಿದ್ದ ಟೀಂ ಇಂಡಿಯಾ ಸೋಲನ್ನು ಅರಗಿಸಿಕೊಳ್ಳಲು ಅಭಿಮಾನಿಗಳಿಗೆ ಇನ್ನೂ ಸಾಧ್ಯವಾಗುತ್ತಿಲ್ಲ. ಮೈದಾನದಲ್ಲಿ ಲೈವ್ ವೀಕ್ಷಿಸುತ್ತಿದ್ದ ಅಭಿಮಾನಿಗಳು ಹಾಗೂ ಟಿವಿಗೆ ಅಂಟಿಕೊಂಡವರು ತೀವ್ರ ನಿರಾಸೆ ಅನುಭವಿಸಿದ್ದಾರೆ. ಹೀಗಿರುವಾಗ ತಿರುಪತಿಯಲ್ಲಿಘೋರ ದುರಂತವೊಂದು ನಡೆದಿದೆ. ಟೀಂ ಇಂಡಿಯಾ ಸೋಲನ್ನು ಸಹಿಸಲಾಗದೆ ಯುವಕನೊಬ್ಬ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಕ್ರಿಕೆಟ್ ನೋಡುತ್ತಲೇ ಕ್ರಿಕೆಟ್ ಅಭಿಮಾನಿಯೊಬ್ಬ ಸಾವನ್ನಪ್ಪಿರುವ ಘಟನೆ ಹೃದಯವಿದ್ರಾವಕವಾಗಿದೆ.
ತಿರುಪತಿ ಜಿಲ್ಲೆ ಗ್ರಾಮಾಂತರ ಮಂಡಲ ದುರ್ಗಾ ಸಮುದ್ರದ ಜ್ಯೋತಿ ಕುಮಾರ್ ಎಂಬಾತ ಬಿಟೆಕ್ ಮಾಡಿಕೊಂಡು, ಸ್ಥಳೀಯವಾಗಿ ಕಂಪ್ಯೂಟರ್ ಸೆಂಟರ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಭಾನುವಾರ ತನ್ನ ಸ್ನೇಹಿತರೊಂದಿಗೆ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸುತ್ತಿದ್ದರು. ಆದರೆ ಬ್ಯಾಟಿಂಗ್ ವೇಳೆ ಭಾರತ ತೀವ್ರ ನಿರಾಶೆಯ ಆಟವಾಡಿತು. ಬೌಲರ್‌ಗಳಾದರೂ ತಮ್ಮ ಸಾಮರ್ಥ್ಯ ತೋರಿ ಪಂದ್ಯ ಗೆಲ್ಲಲಿ ಎಂದು ಫ್ಯಾನ್ಸ್ ಹಾರೈಸಿದ್ದರು.
ಆದರೆ ಆ ಬಳಿಕ ಪಂದ್ಯ ನಡೆಯುತ್ತಿದ್ದಂತೆ ಜ್ಯೋತಿ ಕುಮಾರ್ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಸಂಜೆ ಆರು ಗಂಟೆಗೆ ಎರಡನೇ ಇನ್ನಿಂಗ್ಸ್ ಶುರುವಾದ ಮೇಲೆ.. ಆಸ್ಟ್ರೇಲಿಯದ 3 ವಿಕೆಟ್ ಗಳು ಬೇಗ ಪತನವಾದಾಗ.. ಪಂದ್ಯ ಗೆಲ್ಲತ್ತೇವೆ ಎಂದು ಟೀಂ ಇಂಡಿಯಾ ಅಭಿಮಾನಿಗಳು ಅಂದುಕೊಂಡರು. ಆದರೆ ಆ ಬಳಿಕ ನಮ್ಮ ಬೌಲರ್‌ಗಳು ಸತತ ರನ್ ನೀಡುತ್ತಿದ್ದರಿಂದ ಜ್ಯೋತಿ ಕುಮಾರ್ ಮತ್ತೇ ತೀವ್ರವಾಗಿ ಆತಂಕಗೊಂಡಿದ್ದರು.
ಆಸ್ಟ್ರೇಲಿಯದ ಗೆಲುವು ಮತ್ತು ಭಾರತದ ಸೋಲಿನ ನಂತರ ಆಟಗಾರರು ಕಣ್ಣೀರು ಸುರಿಸುವುದನ್ನು ಅವರು ಸಹಿಸಲಿಲ್ಲ. ಈ ಸಂದರ್ಭದಲ್ಲಿ ಜ್ಯೋತಿ ಕುಮಾರ್ ಏಕಾಏಕಿ ಕುಸಿದು ಬಿದ್ದರು. ಕೂಡಲೇ ಆತನ ಸ್ನೇಹಿತರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅದಾಗಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಮಗನ ಹಠಾತ್ ಸಾವಿನಿಂದ ಪಾಲಕರು ಕಂಬನಿ ಮಿಡಿದಿದ್ದಾರೆ. ಸದ್ಯದಲ್ಲೇ ಆತನಿಗೆ ಮದುವೆ ಮಾಡಿಸಲು ಬಯಸಿದ್ದೆವು. ಆದರೆ ತಮ್ಮ ಮಗು ಬಾರದ ಲೋಕ ಸೇರಿಕೊಳ್ಳುತ್ತಾನೆ ಎಂದು ಊಹಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಸೋಲು ಆ ಯುವಕನ ಜೀವವನ್ನೇ ತೆಗೆದುಕೊಂಡಿತು. ಈ ಪಂದ್ಯ ನೋಡದೇ ಇದ್ದಿದ್ದರೆ ಬದುಕುತ್ತಿದ್ದ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ಅನಾವಶ್ಯಕವಾಗಿ ಜೀವ ಕಳೆದು ಹೋಯಿತು ಎಂದು ಅವರು ಮರುಗಿದ್ದಾರೆ.