ಟೀಮ್ ಇಂಡಿಯಾಕ್ಕೆ ಶುಭಾಶಯಗಳ ಸುರಿಮಳೆ: ಮೊಹಮ್ಮದ್ ಶಮಿ ತಾಯಿ ಏನು ಹೇಳಿದ್ರು ನೋಡಿ

ಭಾರತ-ಆಸ್ಟ್ರೇಲಿಯಾ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಫೈಟ್ ನಡೆಯಲಿದ್ದು, ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಭಾರತದ ಕ್ರಿಕೆಟ್ ದಿಗ್ಗಜರು, ಟೀಮ್ ಇಂಡಿಯಾ ಆಟಗಾರರ ಕುಟುಂಬದವರು, ಬಾಲಿವುಡ್, ಸ್ಯಾಂಡಲ್​ವುಡ್ ನಟ-ನಟಿಯರು ಭಾರತ ಗೆಲ್ಲಲಿ ಎಂದು ಶುಭಕೋರಿದ್ದಾರೆ. ಮತ್ತೊಂದೆಡೆ ಟೀಮ್ ಇಂಡಿಯಾ ಜಯಕ್ಕೆ ಹೋಮ-ಹವನಗಳು ನಡೆಯುತ್ತಿದೆ.

ಟೀಮ್ ಇಂಡಿಯಾ ವಿಶ್ವಕಪ್ 2023 ರಲ್ಲಿ ಫೈನಲ್ ತಲುಪಲು ಪ್ರಮುಖ ಕಾರಣರಾಗಿರುವ ಮೊಹಮ್ಮದ್ ಶಮಿ ಅವರ ತಾಯಿ ಕೂಡ ಟೀಮ್ ಇಂಡಿಯಾಕ್ಕೆ ಆಲ್​ ದಿ ಬೆಸ್ಟ್ ಹೇಳಿದ್ದಾರೆ. ಇಡೀ ಭಾರತ ಕ್ರಿಕೆಟ್ ತಂಡ ತನ್ನ ಮಗನಿದ್ದಂತೆ ಎಂದು ಮೊಹಮ್ಮದ್ ಶಮಿ ಅವರ ತಾಯಿ ಅಂಜುಮ್ ಅರಾ ಎಎನ್‌ಐ ಜೊತೆ ಮಾತನಾಡುತ್ತಾ ಹೇಳಿದ್ದಾರೆ. ಹಾಗೂ ವಿಶ್ವಕಪ್ ಗೆದ್ದು ಎಲ್ಲರೂ ಮನೆಗೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಮತ್ತೊಂದೆಡೆ, ಇಶಾನ್ ಕಿಶನ್ ಅವರ ತಾಯಿ ಕೂಡ, ವಿಶ್ವಕಪ್​ನಂತಹ ದೊಡ್ಡ ಟೂರ್ನಿಯ ಮಧ್ಯೆ ಮೈದಾನದಲ್ಲಿ ನನ್ನ ಮಗನನ್ನು ನೋಡಲು ನನಗೆ ಸಂತೋಷವಾಗಿದೆ. ಮಗ ಆಡುವುದು ಅಥವಾ ಆಡದಿರುವುದು ತಂಡದ ಸಂಯೋಜನೆಯ ಮೇಲೆ ಅವಲಂಬಿತವಾಗಿರುತ್ತದೆ. ಭಾರತ ವಿಶ್ವಕಪ್ ಗೆಲ್ಲುತ್ತದೆ ಎಂದು ಹೇಳಿದ್ದಾರೆ.

ಬಾಲಿವುಡ್​ನ ದಿಗ್ಗಜ ನಟ ಅನುಪಮ್ ಖೇರ್, “ನಾನು ಫೈನಲ್ ಪಂದ್ಯವನ್ನು ಖಂಡಿತವಾಗಿ ನೋಡುತ್ತೇನೆ. ಆದರೆ ನಾನು ಬೆಂಗಳೂರಿನಿಂದ ಪ್ರಯಾಣಿಸುತ್ತಿರುವ ಕಾರಣ ಸಂಪೂರ್ಣ ಎರಡನೇ ಇನ್ನಿಂಗ್ಸ್ ಅನ್ನು ಸಂಪೂರ್ಣವಾಗಿ ನೋಡುತ್ತೇನೆ. ನಮ್ಮ ದೇಶವು ಫೈನಲ್ ತಲುಪಿದ್ದಕ್ಕೆ ಖುಷಿಯಿದೆ. ನಾವು ವಿಶ್ವಕಪ್ ಗೆಲ್ಲುತ್ತೇವೆ ಮತ್ತು ಅದು ರಾಷ್ಟ್ರಕ್ಕೆ ಉಡುಗೊರೆಯಾಗಲಿದೆ,” ಎಂದು ಹೇಳಿದ್ದಾರೆ.

ಸ್ಯಾಂಡಲ್​ವುಡ್ ನಟ ಡಾರ್ಲಿಂಗ್‌ ಕೃಷ್ಣ, “ಇದು 2003ರ ಸೇಡು ತೀರಿಸಿಳ್ಳುವ ಸಮಯ. ಆ ಪಂದ್ಯವನ್ನು ನೋಡುವಾಗ ನಾವು ಚಿಕ್ಕವರಾಗಿದ್ದೆವು. ಆ ಸಮಯದಲ್ಲಿ ಭಾರತ ಸೋತಿದ್ದಾಗ ತುಂಬಾ ಬೇಸರವಾಗಿತ್ತು. ಈ ಬಾರಿ ಉತ್ತಮ ತಂಡವಾಗಿದೆ. ಎಲ್ಲ ಆಟಗಾರರು ಚೆನ್ನಾಗಿ ಆಡುತ್ತಿದ್ದಾರೆ. ವಿಶ್ವಕಪ್ ಗೆದ್ದೇ ಗೆಲ್ಲುತ್ತೇವೆ,” ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಸ್ಟೇಡಿಯಂಗೆ ಈಗಾಗಲೇ ಸಾವಿರಾರು ಜನರು ಬಂದು ಕಾಯುತ್ತಿದ್ದಾರೆ. ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಈ ಪಂದ್ಯ ವೀಕ್ಷಣೆಗೆ ದಿಗ್ಗಜ ಆಟಗಾರರು, ಪ್ರಸಿದ್ಧ ನಟ-ನಟಿಯರು ಕೂಡ ಆಗಮಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರ ಪತ್ನಿ ನಟಿ ಅನುಷ್ಕಾ ಶರ್ಮಾ ಖಾಸಗಿ ಜೆಟ್‌ನಲ್ಲಿ ಅಹ್ಮದಾಬಾದ್​ಗೆ ತಲುಪಿದ್ದಾರೆ. ಇದರ ಬೆನ್ನಲ್ಲೇ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಕೂಡ ಪಂದ್ಯ ವೀಕ್ಷಣೆಗೆ ಬಂದಿದ್ದಾರೆ. ಭಾರತೀಯ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಅವರ ಪತ್ನಿ ಅಥಿಯಾ ಶೆಟ್ಟಿ ಕೂಡ ಬಂದಿದ್ದಾರೆ.