ಕಲಬುರಗಿ, ನ.18: ಕೆಇಎ ನಡೆಸಿದ ಎಫ್ಡಿಎ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಸಿಐಡಿಗೆ ವಹಿಸಲಾಗಿದೆ. ಇನ್ನು ಅಕ್ರಮದ ಕಿಂಗ್ಪಿನ್ ಆಗಿರುವ ಆರ್ಡಿ ಪಾಟೀಲ್ ಅವರನ್ನು ಜಿಮ್ಸ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕರೆತಂದಾಗ ಓರ್ವ ಕಾನ್ಸಟೇಬಲ್ ನಮಸ್ಕಾರ ಮಾಡಿದ ಹಿನ್ನಲೆ ಅಮಾನತು ಮಾಡಲಾಗಿದೆ.ಆರ್ಡಿ ಪಾಟೀಲ್ಗೆ ಸಲಾಂ ಎಂದಿದ್ದ ನಗರದ ಬ್ರಹ್ಮಪೂರ ಪೊಲೀಸ್ ಠಾಣೆಯ ಕಾನ್ಸಟೇಬಲ್ ಮಾಳಪ್ಪ ಭಾಸಗಿ ಎಂಬುವವರನ್ನು ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನರವರು ಅಮಾನತಗೊಳಿಸಿ ಆದೇಶಿಸಿದ್ದಾರೆ.
ಚುರುಕುಗೊಂಡ ತನಿಖೆ
ಪ್ರಕರಣವನ್ನು ಸಿಐಡಿಗೆ ವಹಿಸಿದ ಮೇಲೆ ತನಿಖೆ ಚುರುಕುಗೊಂಡಿದೆ. ಅದರಂತೆ ಪ್ರಕರಣದಲ್ಲಿ ಭಾಗಿಯಾದ ಹಲವರನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಯುತ್ತಿದೆ. ಅದರಂತೆ ಇಂದು ತನಿಖೆಯಲ್ಲಿ ಮತ್ತೊಂದು ವಾಟ್ಸಪ್ ಚಾಟ್ ಬಯಲಾಗಿದೆ. ಕೋಡ್ವರ್ಡ್ ಮೂಲಕ ಪ್ರಶ್ನೆಗಳಿಗೆ ಉತ್ತರಗಳನ್ನು ಕಳುಹಿಸಿದ ಚಾಟ್ ಇದಾಗಿದೆ. ಅಕ್ರಮದ ಪ್ರಮುಖ ಆರೋಪಿಯಾದ ಸಿದ್ದರಾಮ ಅಲಿಯಸ್ ಪುಟ್ಟು ಎಂಬುವವರ ಮೊಬೈಲ್ನಿಂದ, ಪರೀಕ್ಷೆ ನಡೆಯುತ್ತಿದ್ದ ಸಮಯದಲ್ಲೇ ಅಭ್ಯರ್ಥಿಗೆ ಪ್ರಶ್ನೆ ಪತ್ರಿಕೆಯಲ್ಲಿದ್ದ ಅಕ್ಷರಗಳ ಆಧಾರದಲ್ಲಿ ಉತ್ತರಗಳು ಬಂದಿರುವುದು ಬೆಳಕಿಗೆ ಬಂದಿದೆ.
ಇನ್ನು ಪರೀಕ್ಷೆ ಅಕ್ರಮ ಪ್ರಕರಣದ ಕಿಂಗ್ಪಿನ್ ಆರ್ಡಿ ಪಾಟೀಲ್ಗೆ ಆನ್‌ಲೈನ್ ಗೇಮ್ಗಳಲ್ಲಿ ಹಣ ಹೂಡಿಕೆ ಮಾಡಿ ಆಟ ಆಡುವ ಚಾಳಿ ಹೊಂದಿರುವುದು ತಿಳಿದುಬಂದಿದೆ. ಆನ್‌ಲೈನ್ ಗೇಮ್‌ಗಾಗಿ ಮೂರು ಮೊಬೈಲ್ ನಂಬರ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದ ಇತ, ಕೆಲವೇ ತಿಂಗಳಲ್ಲಿ 30 ಲಕ್ಷಕ್ಕೂ ಅಧಿಕ ಹಣವನ್ನು ಹೂಡಿಕೆ ಮಾಡಿದ್ದನು. ಆ ಮೂಲಕ ಮೂರು ಅಕೌಂಟ್ಗಳಲ್ಲಿನ ಅಕ್ರಮವಾಗಿ ಬಂದ ಹಣವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡುತ್ತಿದ್ದನು. ಈ ಎಲ್ಲಾ ವಿಚಾರಗಳು ಅಪಾರ್ಟ್ಮೆಂಟ್‌ನಲ್ಲಿ ಸಿಕ್ಕ ಮೊಬೈಲ್ ಪರಿಶೀಲನೆ ವೇಳೆ ಬಯಲಿಗೆ ಬಂದಿತ್ತು. ಈ ಮಧ್ಯೆ ಪ್ರಕರಣದ ಆರೋಪಿಗೆ ನಮಸ್ಕಾರ್ ಮಾಡಿದ ಹಿನ್ನಲೆ ಪೇದೆಯನ್ನು ಅಮಾನತು ಮಾಡಲಾಗಿದೆ.