ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕುವ ರಾಜಕಾರಣಿಗಳ ಪರಿಸ್ಥಿತಿಯಿಂದ ಅಧಿಕಾರಿಗಳು ವ್ಯವಸ್ಥೆಯಿಂದ ಕೈ ತಪ್ಪಿ ಹೋಗುತ್ತಾರೆ- ಸಚಿವ ಮಂಕಾಳ
ಭಟ್ಕಳ: ರಾಜ್ಯ ಮೀನುಗಾರಿಕಾ ಮತ್ತು ಬಂದರು ಒಳನಾಡು ಜಲಸಾರಿಗೆ ಸಚಿವರು, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರಿಂದ ಮಂಗಳವಾರದಂದು ಇಲ್ಲಿನ ಮಿನಿವಿಧಾನ ಸೌಧ ದಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲನ್ನ ಸ್ವೀಕರಿಸಿ ಜನರ ಸಮಸ್ಯೆಗೆ ಪರಿಹಾರ ನೀಡಿದರು.ಸಚಿವರು ತಾಲೂಕು ಆಡಳಿತ ಸೌಧಕ್ಕೆ ಬರುವ ಮಾಹಿತಿ ತಿಳಿದ ಕ್ಷೇತ್ರದ ಸಾವಿರಾರು ಜನರು ತಮ್ಮ ಅಹವಾಲುಗಳನ್ನು ಹಿಡಿದು ಸರದಿ ಸಾಲಿನಲ್ಲಿ ಸಜ್ಜಾಗಿ ನಿಂತಿದ್ದರು. ಈ ಸಮಯದಲ್ಲಿ ಸಚಿವರು ಜನರ ಅಹವಾಲುಗಳನ್ನು ಆಲಿಸಿ ಆದಷ್ಟು ಬೇಗನೆ ಪರಿಹರಿಸುವ ಭರವಸೆಯನ್ನು ನೀಡಿದರು.
ಈ ವೇಳೆ ಸಾರ್ವಜನಿಕಾಗಿ ಯಾವುದಾದರೂ ದೂರುಗಳಿದ್ದರೆ ತಿಳಿಸಿಬಹುದು ಎಂದು ಸಚಿವರು ತಿಳಿಸಿದ್ದು ಈ ಹಿನ್ನೆಲೆ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಭಟ್ಕಳ ತಾಲೂಕ ಘಟಕದ ಅಧ್ಯಕ್ಷ ನಾಗೇಂದ್ರ ನಾಯ್ಕ ಹೇರೂರು ಹಾಗೂ ಪ್ರಧಾನ ಕಾರ್ಯದರ್ಶಿ ನಾಗೇಶ ನಾಯ್ಕ ಹೆಬಳೆ ಸಚಿವರಲ್ಲಿ ಕೆಲದೂರುಗಳನ್ನು ಮುಂದಿಟ್ಟರು.
ಕಳೆದ 15 ವರ್ಷದಿಂದ ತಹಸೀಲ್ದಾರ ಹಾಗೂ ಸಹಾಯಕ ಆಯುಕ್ತರ ಕಚೇರಿಯಲ್ಲಿ ಬೀಡು ಬಿಟ್ಟ ಅಧಿಕಾರಿಗಳು ವರ್ಗಾವಣೆ ಆಗದೇ ಇದ್ದು ಅವರನ್ನು ಶೀಘ್ರವಾಗಿ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು. ಇನ್ನು ಹೆಬಳೆ ಭಾಗದಲ್ಲಿ ಪಿ.ಡಬ್ಲೂಡಿ ಇಲಾಖೆಯಿಂದ ಕಾಮಗಾರಿಗಳ ನಾಮಫಲಕವು ಅಸಮರ್ಪಕವಾಗಿದ್ದು ಇದರಿಂದ ಈ ಹಿಂದೆ ದೊಡ್ಡ ಸಮಸ್ಯೆ ಉಂಟಾಗಿದ್ದು ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕೆಂದು ಪ್ರಸ್ತಾಪಿಸಿದರು.
ಇನ್ನು ತಾಲ್ಲೂಕು ಆಡಳಿತ ಸೌದದ ಕಟ್ಟಡದ ಹೊರಗೆಡೆ ಪಹಣಿ ಪತ್ರಿಕೆ ವಿತರಣೆಯಲ್ಲಿ ದಲ್ಲಾಳಿಗಳು ಲಾಬಿ ಜೋರಾಗಿದೆ. ಇದರಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದ್ದು, ಸರದಿ ಸಾಲಿನಲ್ಲಿಯೇ ಪಹಣಿ ಪತ್ರಿಕೆ ಸಿಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹ ಪಡಿಸಿದರು.
ಸದ್ಯ ತಾಲೂಕು ಆಡಳಿತ ಸೌಧಕ್ಕೆ ಖಾಸಗಿ ಕಟ್ಟಡದಲ್ಲಿರುವ ಸರಕಾರಿ ಇಲಾಖೆಯ ಕಚೇರಿಗಳನ್ನು ತಕ್ಷಣಕ್ಕೆ ಸ್ಥಳಾಂತರಿಸಬೇಕು ಎಂದರು. ಇದೇ ವೇಳೆ ಮುಂಡಳ್ಳಿ ಪಂಚಾಯತ ಸದಸ್ಯ ರಾಜು ನಾಯ್ಕ ಮೀನುಗಾರಿಕೆ ಇಲಾಖೆಯಲ್ಲ ದೋಣಿ ಹಂಚಿಕೆಯಲ್ಲಿ ಅವ್ಯವಹಾರ ನಡೆದಿರುವ ಈಗಾಗಲೇ ದೂರು ನೀಡಿದ್ದು ಈ ಕುರಿತು ಮೀನುಗಾರಿಕೆ ಸಚಿವರು ಗಮನ ಹರಿಸಿ ತನಿಖೆ ನಡೆಸಿ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿದರು.
ನಂತರ ಸಚಿವ ಮಂಕಾಳ ವೈದ್ಯ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಕೆಲವೊಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ನಂತರ ಮಾತನಾಡಿದ ಸಚಿವ ಮಂಕಾಳ ವೈದ್ಯ ‘ ವಿವಿಧ ಇಲಾಖೆಯಲ್ಲಿನ ಕಚೇರಿಗೆ ಇಂದು ಭೇಟಿ ನೀಡಿದ್ದೇನೆ. ಕೆಲವೊಂದು ಬಡವರ ಕೆಲಸವು ತಕ್ಷಣಕ್ಕೆ ಆಗುವಂತಹದಿದ್ದು ಅಂತಹುದನ್ನು ದಿನಗಟ್ಟಲೇ ತಿಂಗಳುಗಟ್ಟಲೇ ಮಾಡಿದ್ದಾರೆ. ಇಂತಹ ಕೆಲಸವನ್ನು ಮಾಡಬಾರದು. 10 ದಿನಗಳೊಳಗಾಗಿ ಯಾವುದೇ ಕಡತ ಇರಲಿ ಅದು ವಿಲೇವಾರಿಯಾಗಲೇಬೇಕು. ಜನರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನನಲ್ಲಿ ತಿಂಡಿ ಊಟ ಕಡಿಮೆ ಬೆಲೆಯಲ್ಲಿ ನೀಡುತ್ತಿದ್ದೇವೆ. ಉಚಿತ ಬಸ್ ಪ್ರಯಾಣ ಅನ್ನ ಭಾಗ್ಯ ಯೋಜನೆ ನೀಡುತ್ತಿದ್ದೇವೆ. ದೂರದ ಗ್ರಾಮೀಣ ಭಾಗದಿಂದ ನಿಮ್ಮಲ್ಲಿಗೆ ಬಂದು ಅವರ ಕೆಲಸ ಮಾಡಿಸಿಕೊಳ್ಳಲು ಬರಲಿದ್ದು ಜನರ ಹಣ ಸಮಯ ವ್ಯರ್ಥ ಮಾಡಬೇಡಿ ನಿಮಗೆ ಪಾಪ ಬರಲಿದೆ. ಅವರು ಬೆವರು ಸುರಿಸಿದ ಹಣದಿಂದ ಬಂದ ತೆರಿಗೆಯಿಂದ ನಮಗೆ ಸಂಬಳ ಬರುತ್ತಲಿದೆ ಎಂಬುದನ್ನು ನೆನಪಿನಲ್ಲಿಟ್ಟು ಜನರ ಕೆಲಸ ಮಾಡಿಕೊಡಬೇಕು ಎಂದು ಹೇಳಿದರು.
ಭಟ್ಕಳ ತಾಲೂಕಿನಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ನಮ್ಮ ಊರು ಹಾಗೂ ಜನರ ಬಗ್ಗೆ ಮೊದಲು ಪ್ರೀತಿ ಬೆಳೆಸಿಕೊಳ್ಳಬೇಕು. ಜನರಿಂದ ಬೈಗುಳ ಹೇಳಿಸಿಕೊಳ್ಳಬೇಡಿ. ವರ್ಷಗಟ್ಟಲೇ ಕಡತ ಟೇಬಲ ಮೇಲೆ ಇಟ್ಟುಕೊಂಡರೆ ಯಾರು ಹೊಗಳುವುದಿಲ್ಲ. ಇದೆಲ್ಲ ವ್ಯವಸ್ಥೆ ಹದಗೆಡಲು ರಾಜಕಾರಣಿಗಳೇ ಕಾರಣ. ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕುವ ರಾಜಕಾರಣಿಗಳ ಪರಿಸ್ಥಿತಿಯಿಂದ ಅಧಿಕಾರಿಗಳು ವ್ಯವಸ್ಥೆಯಿಂದ ಕೈ ತಪ್ಪಿ ಹೋಗುತ್ತಾರೆ ಆಗ ಜನಸಾಮಾನ್ಯರ ಕೆಲಸ ಆಗುವುದಿಲ್ಲ. ಈ ಬಾರಿ ಎಲ್ಲಾ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಒಂದು ಅವಕಾಶ ನೀಡುತ್ತಿದ್ದು ಮುಂದಿನ ಬಾರಿ ಹೀಗಾದರೆ ಸ್ಥಳದಲ್ಲಿಯೇ ಕೆಲಸದಿಂದ ವಜಾ ಮಾಡಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಡಾ. ನಯನಾ ಎನ್., ತಹಸೀಲ್ದಾರ ತಿಪ್ಪೇಸ್ವಾಮಿ, ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಮನೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.