ಭಟ್ಕಳ ತಾಲೂಕಿನ ಕಿತ್ರೆಯಲ್ಲಿ ಗುಡ್ಡ ಕುಸಿತ – ದೊಡ್ಡ ಬಂಡೆಯೊಂದು ಉರುಳಿ ಬೀಳುವ ಆತಂಕ

ಭಟ್ಕಳ: ತಾಲೂಕಿನ ಮಾರುಕೇರಿ ಗ್ರಾಪಂ ವ್ಯಾಪ್ತಿಯ ಕಿತ್ತೆಯಲ್ಲಿ ಮಣ್ಣಿನ ರಸ್ತೆಗೆ ಹೊಂದಿಕೊಂಡು ಇರುವ ಗುಡ್ಡ ಪ್ರದೇಶದಲ್ಲಿ ಮಣ್ಣು ಕುಸಿದು ಬಿದ್ದಿದ್ದು, ಇದೀಗ ಅಲ್ಲಿಯೇ ಇದ್ದ ದೊಡ್ಡ ಬಂಡೆಯೊಂದು ಉರುಳಿ ಬೀಳುವ ಆತಂಕ ಎದುರಾಗಿದೆ.

ಬಂಡೆ ಇರುವ ಜಾಗಕ್ಕೆ ಸರಿಸುಮಾರು 10- 15 ಅಡಿ ದೂರದಲ್ಲಿ 4-5 ಮನೆಗಳಿದ್ದು, ಗುಡ್ಡಕ್ಕೆ ತಾಗಿಕೊಂಡ ರಸ್ತೆಯಲ್ಲಿ ನಿತ್ಯವೂ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು, ದನ ಕರುಗಳು ಓಡಾಡಿಕೊಂಡಿರುತ್ತವೆ. ಕಳೆದ 2-3 ದಿನಗಳಿಂದ ಮಳೆ ಸ್ವಲ್ಪ ಜೋರಾಗಿಯೇ ಸುರಿಯುತ್ತಿದ್ದು, ಮಣ್ಣು ಸಡಿಲಗೊಂಡು ಕುಸಿಯುತ್ತಿರುವುದರಿಂದ ಬಂಡೆ ಕೆಳಕ್ಕೆ ಒರಗುವ ಸಾಧ್ಯತೆಯೂ ಇದೆ. ಆದ್ದರಿಂದ ಅನಾಹುತ ಸಂಭವಿಸುವ ಮೊದಲೇ ಬಂಡೆ ತೆರವಿಗೆ ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ ತಿಪ್ಪೇಸ್ವಾಮಿ, ಮಾರುಕೇರಿ ಗ್ರಾಪಂ ಅಧ್ಯಕ್ಷೆ ನಾಗವೇಣಿ ಗೊಂಡ, ಉಪಾಧ್ಯಕ್ಷ ಎಮ್.ಡಿ.ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಅಗತ್ಯ ಕ್ರಮ
ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.