ಹಳಿಯಾಳ : ತಾಲೂಕಾಡಳಿತ, ಪುರಸಭೆ, ತಾಲೂಕು ಪಂಚಾಯತ್ ಹಾಗೂ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಯೋಗದೊಂದಿಗೆ ಹಳಿಯಾಳ ಪಟ್ಟಣದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಶಾಸಕರಾದ ಆರ್.ವಿ.ದೇಶಪಾಂಡೆಯವರು ಇಂದು ಸೋಮವಾರ ಚಾಲನೆಯನ್ನು ನೀಡಿದರು.
ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಆರ್ ವಿ ದೇಶಪಾಂಡೆ ಅವರು ಸ್ವಚ್ಛತಾ ಅಭಿಯಾನ ಸ್ವಚ್ಛ ಭಾರತ ನಿರ್ಮಾಣದ ಜನಾಂದೋಲನವಾಗಿದೆ. ಸ್ವಚ್ಛತೆ ಮಹಾತ್ಮಾ ಗಾಂಧಿಯವರ ಹೃದಯಕ್ಕೆ ಬಹಳ ಹತ್ತಿರವಾಗಿತ್ತು. ಮಹಾತ್ಮ ಗಾಂಧಿಜೀಯವರ ಜಯಂತಿಯ ಪೂರ್ವಭಾವಿ ಸಿದ್ಧತೆಗಾಗಿ ಕ್ಷೇತ್ರದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು,
ನಮ್ಮ ಮಾತೃಭೂಮಿಯ ಸ್ವಚ್ಛತೆಯ ಕಡೆಗೆ ನಮ್ಮನ್ನು ನಾವು ಅರ್ಪಿಸಿಕೊಳ್ಳುವ ಸಮಯ ಇದಾಗಿದೆ. ಈ ನಿಟ್ಟಿನಲ್ಲಿ ಮಹಾತ್ಮಾ ಗಾಂಧೀಜಿಯವರ ಸ್ವಚ್ಛ ಮತ್ತು ಆರೋಗ್ಯಕರ ಭಾರತದ ನಿರ್ಮಾಣದ ಕನಸನ್ನು ಸಾಕಾರಗೊಳಿಸಬೇಕೆಂದು ಆರ್.ವಿ.ದೇಶಪಾಂಡೆಯವರು ಕರೆ ನೀಡಿದರು.ಆನಂತರ ಸ್ವಚ್ಛತಾ ಅಭಿಯಾನದಲ್ಲಿ ಆರ್ ವಿ ದೇಶಪಾಂಡೆ ಅವರು ಭಾಗವಹಿಸಿದರು. ಈ ಸಂದರ್ಭದಲ್ಲಿ ಆರ್ ವಿ ದೇಶಪಾಂಡೆ ಅವರಿಗೆ ಪತ್ನಿ ರಾಧಾಬಾಯಿ ದೇಶಪಾಂಡೆಯವರು ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಜಿ.ಕೆ.ರತ್ನಾಕರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪರಶುರಾಮ್ ಘಸ್ತೆ, ಪುರಸಭೆಯ ಮುಖ್ಯ ಅಧಿಕಾರಿ ಅಶೋಕ್ ಸಾಳೆನ್ನವರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಾ. ಲಕ್ಷ್ಮೀದೇವಿ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ರವೀಂದ್ರ ಮೆಟಗುಡ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಪಾಟೀಲ್, ಪುರಸಭೆಯ ನಿಕಟ ಪೂರ್ವ ಅಧ್ಯಕ್ಷ ಅಜಾರ್ ಬಸರಿಕಟ್ಟಿ, ನಿಕಟ ಪೂರ್ವ ಉಪಾಧ್ಯಕ್ಷೆ ಸುವರ್ಣ ಮಾದರ್, ಕಾಂಗ್ರೆಸ್ ಮುಖಂಡರುಗಳಾದ ಉಮೇಶ್ ಬೊಳಶೆಟ್ಟಿ, ಶಂಕರ್ ಬೆಳಗಾಂವಕರ್, ಸತ್ಯಜಿತ್ ಗಿರಿ, ಶ್ರೀ ವಿಆರ್‌ಡಿಎಂ ಟ್ರಸ್ಟಿನ ಆಡಳಿತ ಅಧಿಕಾರಿ ಪ್ರಕಾಶ್ ಪ್ರಭು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು, ಪೌರಕಾರ್ಮಿಕರು ಭಾಗವಹಿಸಿದ್ದರು.